ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕೃಷಿ ಅವಲಂಬಿತ ಭಾರತದಲ್ಲಿ ಯುವಜನತೆಯು ಲಾಭದಾಯಕ ಅಲ್ಲವೆಂದು ಕೃಷಿಯಿಂದ ವಿಮುಖವಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಬೇರೆ ಕ್ಷೇತ್ರಗಳಿಗಿಂತ ಕೃಷಿ ಕ್ಷೇತ್ರದ ಕೊಡುಗೆಯೇ ಮಹತ್ವದ್ದಾಗಿದೆ. ಸಂಘಟಿತರಾಗಿ ಸಮರ್ಪಕ ಮಾಹಿತಿ ಮಾರ್ಗದರ್ಶನ ಪಡೆಯುತ್ತಾ ಕೃಷಿ ಮಾಡಿದರೆ ಲಾಭ ಗಳಿಸಬಹುದು ಎಂದು ಮೊಳಹಳ್ಳಿ ಎಂ. ದಿನೇಶ್ ಹೆಗ್ಡೆ ಅಭಿಪ್ರಾಯ ಪಟ್ಟರು.
ಅವರು ಉಡುಪಿ ಜಿಲ್ಲಾ ಕೃಷಿಕ ಸಂಘ ಕುಂದಾಪುರ ವಲಯ ಸಮಿತಿ ಮತ್ತು ಮಲ್ಲಿಗೆ ಬೆಳೆಗಾರರ ಒಕ್ಕೂಟ ಕುಂದಾಪುರ, ಮೊಳಹಳ್ಳಿ ಹೊರನಾಡಿ ನಂದಗೋಕುಲ ಡೈರಿ ಫಾರ್ಮ್ ಅಣ್ಣಪ್ಪ ಕುಲಾಲರ ಮನೆ ವಠಾರದಲ್ಲಿ ಆಯೋಜಿಸಿದ್ದ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಹೊರನಾಡಿ ಯು. ರತ್ನಾಕರ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕರಾದ ಶಶಿಧರ ಹೆಗ್ಡೆ ಕೊಯ್ಕಾಡಿ, ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ಗುಡ್ಡೆಯಂಗಡಿ , ಹಿರಿಯ ಯಕ್ಷಗಾನ ಕಲಾವಿದ ಅಣ್ಣಪ್ಪ ಕುಲಾಲ್ ಶಿರೂರು, ಸಂಜೀವಿನಿ ಒಕ್ಕೂಟ ಮೊಳಹಳ್ಳಿ ಅಧ್ಯಕ್ಷೆ ವಿನೋದ ಡಿ. ಶೆಟ್ಟಿ ಭಾಗವಹಿಸಿದರು. ಮಾಹಿತಿದಾರರಾಗಿ ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ಕಡಿಮೆ ಖರ್ಚು, ಕಡಿಮೆ ಶ್ರಮ, ಗೊಬ್ಬರ, ನೀರು ಬಳಸಿ ಲಾಭದಾಯಕವಾಗಿ ಮಲ್ಲಿಗೆ, ತೆಂಗು, ಅಡಿಕೆ, ಬಾಳೆ ಕೃಷಿ ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳು ಮಾಡುವ ಕುರಿತು ಸಮಗ್ರ ವ್ಶೆಜ್ಞಾನಿಕ ಮಾಹಿತಿ ನೀಡಿದರು.
ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ವಲಯ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಸೋಜಾ ಆನಗಳ್ಳಿ, ಶ್ಯಾಮ ಕೆ. ಅಂಪಾರು, ಪ್ರಭಾಕರ ಶೆಟ್ಟಿ, ಪ್ರೇಮಾ ಶೆಟ್ಟಿ ಮೊಳಹಳ್ಳಿ, ಸವಿತಾ ಹೊಂಬಾಡಿ , ಕಾರ್ಯಕ್ರಮ ಸಂಯೋಜಕರಾದ ಪ್ರೇಮಾನಂದ ಕುಲಾಲ್ ಹೊರನಾಡಿ, ರಮೇಶ್ ಪೂಜಾರಿ ಕ್ಯಾಸನಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕ ಗಣೇಶ್ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.