ಆಲದ ಮರವೇ ಈ ಶಿವನಿಗೆ ಆಲಯ, ಇದು ತುಳುವರ ಅಧಿದೇವತೆ ತುಳುವೇಶ್ವರ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ರಕೃತಿದತ್ತವಾದ ಸ್ಥಳದಲ್ಲಿ ಅಪರೂಪದ ದೇವಾಲಯ. ಅದೂ ಶಿವಲಿಂಗದ ಪಕ್ಕದಲ್ಲಿಯೇ ಇರುವ ನಂದಿ ಸಹಿತ ತುಳುವೇಶ್ವರ ದೇವಸ್ಥಾನ. ಶತಮಾನಗಳ ಹಿಂದೆ ನೆಲೆನಿಂತ ತುಳುವೇಶ್ವರಿನಿಗೆ ಈಗ ಅಭಿವೃದ್ಧಿಯ ಪರ್ವ. ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಮಾರ್ಗದರ್ಶನದಲ್ಲಿ ತುಳುವೇಶ್ವರ ದೇವಸ್ಥಾನದ ಅರ್ಚಕ ಮಹೇಶ್ ಕಿಣಿಯವರ ಸಂಚಾಲಕತ್ವದಲ್ಲಿ, ತುಳುವರ್ಲ್ಡ್ ಫೌಂಡೇಶನ್ನ ಡಾ. ರಾಜೇಶ್ ಆಳ್ವಾ ನೇತೃತ್ವದಲ್ಲಿ ಭಾನುವಾರ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರಿಂದ ಆರೂಢ ಪ್ರಶ್ನೆ ಚಿಂತನೆ ನಡೆಯಿತು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಸರಿ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬಸ್ರೂರುನಲ್ಲಿ ತುಳುವರ ಆರಾಧ್ಯ ದೈವ ಪಂಜುರ್ಲಿ ದೈವದ ಸಂಕೇತವಾದ ವಾರಾಹಿ ನದಿ ತೀರ ದಲ್ಲಿ ಈ ತುಳುವೇಶ್ವರ ದೇವಾಲಯವಿದೆ. ತುಳುನಾಡಿನ ಆರಾಧ್ಯ ದೇವರಾದ ತುಳುವೇಶ್ವರ ದೇವಸ್ಥಾನ ಹಲವಾರು ಸಾವಿರ ವರ್ಷಗಳ ಇತಿಹಾಸ ಇದ್ದು, ಕುಂದಾಪುರದ ಬಸ್ರೂರಿನ ನೆಲದಲ್ಲಿ ಆಲದ ಮರದ ಪೊಟರೆಯೊಳಗೆ ನೆಲೆ ನಿಂತಿದ್ದಾನೆ. ಕಾಲದ ಮಹಿಮೆಯು, ನಮ್ಮೆಲ್ಲರ ಅನಾಸ್ತೆಯೋ ಗೊತ್ತಿಲ್ಲ. ನಶಿಸಿ ಹೋದ ದೇಗುಲಕ್ಕೆ ಪ್ರಕೃತಿಯೇ ಆವರಣವಾಗಿ, ಗರ್ಭಗುಡಿಯಾಗಿ ಆಶ್ರಯ ನೀಡಿದೆ. ಈ ದೇವಸ್ಥಾನದ ಜೀರ್ಣ ಅವಸ್ಥೆಯನ್ನು ಕಂಡು ತುಳುವರ್ಲ್ಡ್ ಫೌಂಡೇಶನ್ ಜೀರ್ಣೋದ್ಧಾರದ ಬಗ್ಗೆ ಚಿಂತಿಸಲು ಒಂದು ದಿನದ ತಾಂಬೂಲ ಪ್ರಶ್ನೆ ನಡೆಸಿದೆ.
ತುಳುನಾಡು ಎಂದು ಕರೆಯಲ್ಪಡುವ ಕಾಸರಗೋಡಿನಿಂದ ಬೈಂದೂರುವರೆಗಿನ ಕಡಲ ಕಿನಾರೆ ಪ್ರದೇಶದ ತುಳು ಭಾಷಿಗರಿಗೆ ಈ ದೇವಾಲಯವೇ ಅಧಿದೇವತೆಯಾಗಿದೆ. ಶತಮಾನಗಳ ಹಿಂದೆ ತುಳುವೇಶ್ವರನಿಗೆ ದೇವಾಲಯ ಇತ್ತು. ಆದರೆ ಕಾಲದ ವಿನಾಶಕ್ಕೆ ಸಿಕ್ಕಿ ಸುಮಾರು 500 ವರ್ಷಗಳ ಹಿಂದೆ ಈ ದೇವಾಲಯವು ಶಿಥಿಲಗೊಂಡಿದೆ. ವಿಶೇಷವೆಂದರೆ ಅನೇಕ ವರ್ಷಗಳ ಹಿಂದೆ ದೇವಾಲಯದ ಗೋಡೆಯ ಬಳಿ ಬೆಳೆದ ಆಲದ ಮರವು ಶಿವಲಿಂಗದ ಸುತ್ತ ಆವರಿಸಿದೆ.
ತುಳುವೇಶ್ವರ ಇತಿಹಾಸ ಕಾಲದಲ್ಲಿ ಸಾಕಷ್ಟು ಪ್ರಸಿದ್ದಿ ಹೊಂದಿದ್ದ ದೇವ ಸನ್ನಿಧಾನವಾಗಿತ್ತು ಎನ್ನಲು ಶಾಸನಾಧಾರಗಳೂ ಇವೆ. ಕ್ರಿಶ 1041ರಂದು ಕೆತ್ತಿಸಲಾದ ಶಾಸನದಲ್ಲಿ ತುಳುವೇಶ್ವರನಿಗೆ ದಾನ ಕೊಟ್ಟ ವಿಷಯವಿದೆ. ಬಸ್ರೂರಿನ ರಾಜ್ಯಪಾಲನಾದ ಬಸವಣ್ಣ ಒಡೆಯನ ಆಳ್ವಿಕೆಯಲ್ಲಿ ಅದೇ ಊರಿನ ಭೂ ಒಡೆತನದ ಪ್ರತಿಷ್ಠಿತ ಮನೆತನದವಳಾದ ತುಳುವಕ್ಕ ಹೆಗ್ಗಡತಿ ಎಂಬುವವಳು ನಿರ್ಮಿಸಿದ್ದ ಧರ್ಮಛತ್ರದ ವೆಚ್ಚಕ್ಕೆ ಭೂಮಿಯಿಂದ ಬರುವ ಆದಾಯವನ್ನು ದಾನ ಮಾಡುತ್ತಿದ್ದುದಲ್ಲದೆ ತುಳುವೇಶ್ವರ ದೇವರಿಗೆ ಮತ್ತು ಮುಳುಲ ದೇವಿಗೆ ದಾನವನ್ನು ಮಾಡುತ್ತಿದ್ದ ವಿಚಾರ ಶಾಸನದಲ್ಲಿ ಉಲ್ಲೇಖಿಸಲಾಗಿದೆ
ಶಿವನ ಎದುರಲ್ಲಿ ನಂದಿಯ ವಿಗ್ರಹವಿದೆ. ಮುರಕಲ್ಲಿನಲ್ಲಿ ಕಟ್ಟಿರುವ ಗೋಡೆ, ನಂದಿ ಮಂಟಪದ ಕುರುಹುಗಳು, ನೈವೇದ್ಯ ಶಾಲೆ, ಅವಶೇಷಗಳು ಹೀಗೆ ಮತ್ತಷ್ಟು ಪ್ರಾಚೀನ ದಾಖಲೆಗಳಿವೆ. ನಂದಿಯ ವಿಗ್ರಹವು ಅತ್ಯಂತ ಅಪರೂಪದ ಕೆತ್ತನೆಯಿಂದ ಕೂಡಿದೆ. ಇದು ಏಕಶಿಲಾ ವಿಗ್ರಹವಾಗಿದೆ. ಸುಮಾರು 60 ವರ್ಷಗಳ ಹಿಂದೆ ನಿಧಿಯಾಸೆಗೆ ನಂದಿಯ ವಿಗ್ರಹವನ್ನು ಕಬ್ಬಿಣದ ಸಲಾಕೆಯಿಂದ ಪೀಠದಿಂದ ಬೇರ್ಪಡಿಸಲು ವಿಫಲ ಪ್ರಯತ್ನ ನಡೆದಿತ್ತು. ಅಂದಿನಿಂದ ನಂದಿಯ ಒಂದು ಭಾಗ ವಾಲಿಕೊಂಡಂತೆ ಮತ್ತು ಮೇಲಕ್ಕೆ ಎದ್ದಿರುವ ಹಾಗೆ ಇದೆ.
ಸುಮಾರು 150 ವರ್ಷಗಳ ಹಿಂದೆ ವಿಠಲ ಕಿಣಿ ಎನ್ನುವ ವೈಷ್ಣವ ಸಂಪ್ರದಾಯಸ್ಥ ಮನೆತನಕ್ಕೆ ಸೇರಿದ ವ್ಯಕ್ತಿ ಈ ಶಿವಲಿಂಗವಿದ್ದ ಜಾಗವನ್ನು ಖರೀದಿಸಿದ್ದರು. ಹಾಗೆ ಜಾಗ ಖರೀದಿಸುವಾಗ ಅವರಿಗೆ ಈ ಸ್ಥಳದಲ್ಲಿ ಶಿವಲಿಂಗವಿದೆ ಎನ್ನುವ ವಿಚಾರ ತಿಳಿದಿರಲಿಲ್ಲ. ಆದರೆ ಎಂದು ಶಿವನ ಕಾರಣಿಕ ಶಕ್ತಿ ಗೋಚರವಾಯಿತೋ ಅಂದೇ ವಿಠಲ ಕಿಣಿ ತಾವು ಪ್ರತಿನಿತ್ಯ ಆ ಪರಮೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸಲು ಪ್ರಾರಂಭಿಸುತ್ತಾರೆ. ಅಂದಿನಿಂದ ಇಂದಿನವರೆಗೆ ವಿಠಲ ಕಿಣಿ ಮನೆತನದವರೇ ಈ ತುಳುವೇಶ್ವರನಿಗೆ ನಿತ್ಯ ನೈಮಿತ್ತಿಕ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಈಗ ಶಿವನ ಪೂಜಾ ಕೈಂಕರ್ಯ ನಡೆಸುತ್ತಿರುವ ಕುಟುಂಬಕ್ಕೆ ಶಿವನ ಈ ಪ್ರಾಚೀನ ಸನ್ನಿಧಾನವನ್ನು ಜೀರ್ಣೋದ್ದಾರ ಮಾಡಬೇಕೆಂದು ಬಯಕೆ ಇದೆ. ಆದರೆ ಹಲವು ಕಡೆ ಪ್ರಶ್ನೆ, ದರ್ಶನಾದಿಗಳನ್ನು ನಡೆಸಿ ಕೇಳಲಾಗಿ ಈ ದೇವಾಲಯ ಜೀರ್ಣೋದ್ದಾರಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ, ಯೋಗಿಯೊಬ್ಬರ ಮೂಲಕ ಈ ದೇವಾಲಯ ಪುನರ್ ಅಭಿವೃದ್ಧಿ ಹೊಂದಲಿದೆ ಎನ್ನುವ ಉತ್ತರ ದೊರಕಿತ್ತು. ತುಳುನಾಡಿನ ಬೇರೆಲ್ಲಿಯೂ ‘ತುಳುವೇಶ್ವರ’ ಎನ್ನುವ ದೇವರ ಸನ್ನಿಧಾನವಿಲ್ಲ. ಹೀಗಾಗಿ ಕಾಸರಗೋಡಿನಿಂದ ಪ್ರಾರಂಭವಾಗಿ ಉಡುಪಿ ಜಿಲ್ಲೆ ಬೈಂದೂರಿನ ತನಕದ ತುಳು ಭಾಷಾ ಪ್ರಾಂತ್ಯಕ್ಕೆ ಈ ಶಿವನು ಅಧಿದೇವತೆಯಾಗಿದ್ದಾನೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
ತುಳುವೇಶ್ವರ ದೇವಾಲಯವು ಬಸ್ರೂರಿನಲ್ಲಿ ರುವ 24 ದೇವಾಲಯಗಳಲ್ಲಿ ಒಂದಾಗಿದೆ, ಜೊತೆಗೆ ನಖರೇಶ್ವರ ದೇವಾಲಯ, ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯ ಮತ್ತು ಶ್ರೀ ಮಹಾಲಸಾ ನಾರಾಯಣಿ ದೇವಾಲಯದಂತಹ ಇತರ ಗಮನಾರ್ಹ ದೇವಾಲಯಗಳು. ಕಾಸರಗೋಡಿನ ಮತ್ತು ಮಂಗಳೂರಿನ ತುಳುವೆರೆ ಆಯನೊ ಕೂಟವು ಈ ನೆಲದಲ್ಲಿ ಹಲವಾರು ಕಾರ್ಯಕ್ರಮ ಗಳಿಗೆ ಸಾಕ್ಷಿಯಾಗಿದೆ. 2015ರಲ್ಲಿ ತುಳುನಾಡ ತಿರ್ಗಾಟ ಎಂಬ ಕಾರ್ಯಕ್ರಮವನ್ನು ತುಳುವೇಶ್ವರನ ಸನ್ನಿಧಿಯಿಂದ ಆರಂಭಿಸಿತ್ತು. 2016 ಬದಿಯಡ್ಕದಲ್ಲಿ ನಡೆದ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಪ್ರಯುಕ್ತ 108 ದಿನಗಳ ರಥಯಾತ್ರೆಗೆ ಇಲ್ಲಿಂದಲೇ ಚಾಲನೆ ನೀಡಲಾಯಿತು. 2017ರಲ್ಲಿ 1 ಲಕ್ಷ ಸಹಿ ಅಭಿಯಾನವನ್ನು ಹಮ್ಮಿಕೊಂಡಿತು. ಅಲ್ಲದೆ 2018ರಲ್ಲಿ ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ಬಸ್ರೂರಿನಲ್ಲಿ ತುಳುನಾಡೋಚ್ಚಯ ಕಾರ್ಯಕ್ರಮಕ್ಕೆ ರೂಪುರೇಷೆ ನೀಡಿತ್ತು. ಇದೀಗ ತುಳುವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆ ಆರಂಭಗೊಂಡಿದ್ದು, ಸೆಪ್ಟಂಬರ್ ನಲ್ಲಿ ಅನಿರ್ದಿಷ್ಟಾವಧಿ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ. ಬಳಿಕದ್ದು ಎಲ್ಲವೂ ಶಿವಲೀಲೆ…..