ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಆಯೋಜಿಸಿರುವ ವಿ-ಗ್ರೋ ಬಿಸಿನೆಸ್ ಡೇ ಬ್ಯುಸಿನೆಸ್ ಫೆಸ್ಟ್ ಮೂರು ಹಂತಗಳಲ್ಲಿ ಆಯೋಜನೆಗೊಂಡು ಮೊದಲನೇ ಹಂತದಲ್ಲಿ ವ್ಯವಹಾರ ಯೋಜನೆಯ ಪ್ರಸ್ತುತಿ, ಎರಡನೇ ಹಂತದಲ್ಲಿ ತಾವೇ ತಯಾರಿಸಿದ ಉತ್ಪನ್ನಗಳೊಂದಿಗೆ ಇತರ ವಸ್ತುಗಳ ಮಾರಾಟ ಹಾಗೂ ಮೂರನೇ ಹಂತದಲ್ಲಿ ಹಣಕಾಸಿನ ಆಯ-ವ್ಯಯ ಪಟ್ಟಿಗಳನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ತನ್ಮೂಲಕ ವ್ಯವಹಾರ ಕೌಶಲ್ಯ ವೃದ್ಧಿಸುವ ಉದ್ದೇಶದಿಂದ, ಅಂತಿಮ ಹಾಗೂ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಿಗೆ ಅಂತರ ತರಗತಿವವಾರು ಸ್ಪರ್ಧೆ ನಡೆಯಿತು.
ಬಿ.ಕಾಂ. ಪದವೀಧರರಿಗೆ ನವ ಉದ್ಯಮಗಳನ್ನು ಕೈಗೊಳ್ಳಲು ವ್ಯವಹಾರ ಕೌಶಲ್ಯಗಳು ಅಗತ್ಯವಾಗಿದೆ ಎಂದು ಮುಖ್ಯ ಅತಿಥಿಗಳಾದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಜುಡಿತ್ ಮೆಂಡೋನಾ ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಸಿ.ಎ. ಅನ್ವೇಶ್ ಶೆಟ್ಟಿ ವಿದ್ಯಾರ್ಥಿಗಳಿಗೆ ಲೋಕಜ್ಞಾನದೊಂದಿಗೆ ಆವಿಷ್ಕಾರ ಭರಿತ ವ್ಯವಹಾರ ಜ್ಞಾನವು ಅಗತ್ಯ ಎಂದರು. ತೀರ್ಪುಗಾರರಾಗಿ ನೇಹಾ ಪ್ರಭು ಸ್ಥಾಪಕರು ಆಕ್ಷರ ಟುಟೋರಿಯಲ್, ಸಂಪತ್ ಶೆಟ್ಟಿ ತೆರಿಗೆ ವಿಶ್ಲೇಷಕರು ಮತ್ತು ರಯನ್ ಫೆರ್ನಾಂಡಿಸ್ ವಕೀಲರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ಪ್ರಸ್ತಾಪಿಸಿದರು. ವಾಣಿಜ್ಯ ವಿಭಾಗದ ಪ್ರಾಧ್ಯಾಪಕರುಗಳಾದ ಸತೀಶ್ ಶೆಟ್ಟಿ ವಿಜೇತರ ಪಟ್ಟಿಯನ್ನು ವಾಚಿಸಿ, ಸುಧೀರ್ ಕುಮಾರ್ ವಂದಿಸಿ, ಪ್ರೀತಿ ಹೆಗ್ಡೆ ನಿರೂಪಿಸಿದರು.
ವಿ-ಗ್ರೋ 2025 ಸಮಗ್ರ ಪ್ರಥಮ ಸ್ಥಾನವನ್ನು ಬಿ.ಕಾಂ. ‘ಡಿ’, ದ್ವಿತೀಯ ಸ್ಥಾನವನ್ನು ಅಂತಿಮ ಬಿ.ಕಾಂ. ‘ಬಿ’ ಮತ್ತು ತೃತಿಯ ಸ್ಥಾನವನ್ನು ಅಂತಿಮ ಬಿ.ಕಾಂ. ‘ಸಿ’ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಕಾಂ. ರ‍್ಯಾಂಕ್ ವಿಜೇತರಾದ ಪ್ರತೀಕ್ಷಾ ಶೆಟ್ಟಿ, ರಶ್ಮಿ ಉಡುಪ, ಬಿ.ಸಿ.ಎ. ರ‍್ಯಾಂಕ್ ವಿಜೇತೆ ಕೀರ್ತನ, ಎಂ.ಕಾಂ. ರ‍್ಯಾಂಕ್ ವಿಜೇತೆ ಪ್ರತೀಕ್ಷಾ ಪ್ರಭಾಕರ್ ಶೆಟ್ಟಿ, ಮತ್ತು ಎಂ.ಬಿ.ಎ. ರ‍್ಯಾಂಕ್ ವಿಜೇತ ನಿರಂಜನ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.