ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವ್ಯಾಪಾರ, ವ್ಯವಹಾರ ಹಾಗೂ ವ್ಯವಾಹಾರಿಕ ಕೆಲಸದ ಜೊತೆಗೆ ಆಧ್ಯಾತ್ಮಿಕ ಕೆಲಸದ ಸಂಬಂಧವು ಮನುಷ್ಯನಿಗೆ ಅವಶ್ಯಕವಾಗಿದೆ. ಆಧ್ಯಾತ್ಮಿಕ ಕಾರ್ಯದಿಂದ ಜೀವನವು ಉದ್ಧಾರ ಆಗಲು ಬೇಕಾದ ಶಕ್ತಿ, ಪುಣ್ಯ ನಮಗೆ ಪ್ರಾಪ್ತವಾಗುತ್ತದೆ. ಜೀವನ ಸಾರ್ಥಕ, ಜೀವನದಲ್ಲಿ ಉದ್ಧಾರವಾಗಲು ಭಗವಂತನ ಕೃಪೆ ಅವಶ್ಯಕ. ಭಗವಂತನ ಸೇವೆಯಲ್ಲಿ ತೊಡಗಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಎಷ್ಟೇ ಕೆಲಸವಿದ್ದರೂ ಭಗವಂತನ ಆರಾಧನೆಗೋಸ್ಕರ, ಭಗವತ್ ಸೇವೆ ಮಾಡಲು ನಮ್ಮ ಸಮಯವನ್ನು ಕೊಡಲೇ ಬೇಕು ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಹೇಳಿದರು.
ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದಲ್ಲಿ ಬುಧವಾರ ಶ್ರೀ ನಾಗದೇವರ ಜೀರ್ಣಾಷ್ಟಬಂಧ ಪುರ:ಸರ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ದೇವರಿಗೆ ಬ್ರಹ್ಮಕಲಶಾಭಿಷೇಕ ನೆರವೇರಿಸಿ, ಶ್ರೀ ನಾಗದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತು ಪೀಠ ಸಮರ್ಪಣೆ ಮಾಡಿ ಆಶೀರ್ವಚನ ನೀಡಿ ಮಾತನಾಡಿದರು.
ದೇವರು ನಮಗೆ ಕೊಟ್ಟ ಸಾಮಥ್ರ್ಯವನ್ನು ಭಗವತ್ ಸೇವೆಗಾಗಿ, ಇನ್ನೊಬ್ಬರ ಉಪಕಾರಕ್ಕಾಗಿ, ಒಳ್ಳೆಯ ಕೆಲಸಕ್ಕಾಗಿ ವಿನಿಯೋಗ ಮಾಡಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ. ಬೇರೆಯವರು ನಮ್ಮನ್ನು ಆದರ್ಶವಾಗಿ ನೋಡುವಂತೆ ನಮ್ಮಲ್ಲಿ ಆದರ್ಶವನ್ನು ಹೊಂದಬೇಕಾದುದು ನಮ್ಮ ಕರ್ತವ್ಯ. ಭಗವಂತ ನಮಗೆ ಯಾವ ಸಾಮಥ್ರ್ಯ ಕೊಟ್ಟಿದ್ದಾನೆ, ಯಾವ ರೀತಿ ಮುಂದೆ ಹೋಗಬೇಕು, ನಮ್ಮಿಂದ ಏನು ಸಾಧ್ಯವಾಗುತ್ತದೆ ಎಂಬುದನ್ನು ಸ್ವಲ್ಪಕಾಲ ವಿಚಾರ ಮಾಡಿದರೆ ಜೀವನದಲ್ಲಿ ತುಂಬಾ ದೊಡ್ಡ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.
ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ಸಂಬಂಧವನ್ನು ಇಟ್ಟುಕೊಂಡರೆ ಜೀವನ ಉದ್ಧಾರ, ಸಾರ್ಥಕ ಆಗುತ್ತದೆ. ನಮ್ಮ ಮಕ್ಕಳಿಗೆ ವಿಶೇಷವಾಗಿ ನಮ್ಮ ಸಂಸ್ಕಾರಗಳನ್ನು ಕೊಡಬೇಕು. ಹಿಂದಿನವರು ತೋರಿಸಿಕೊಟ್ಟ ಮಾರ್ಗವನ್ನು ಮಕ್ಕಳಿಗೆ ತೋರಿಸಿಕೊಟ್ಟಾಗ ಸಂಸ್ಕಾರ ಇನ್ನಷ್ಟು ಹೆಚ್ಚಾಗಿ ಅವರು ಜೀವನದಲ್ಲಿ ಉನ್ನತಿ ಪಡೆಯಲು ಸಾಧ್ಯವಾಗಲಿದೆ. ಎಷ್ಟೇ ಕೆಲಸ, ವ್ಯವಹಾರ ಇದ್ದರೂ ದೇವರ ಆರಾಧನೆಯನ್ನು ಬಿಡಬಾರದು ಎಂದು ಹೇಳಿದ ಶ್ರೀಗಳು ಭಗವಂತನ ಕೃಪೆಯಿಂದ ಅನುಗ್ರಹದಿಂದ ಸಮಾಜದಲ್ಲಿ ಸುಖ, ಶಾಂತಿ ನೆಲೆಸಿ ಎಲ್ಲರಿಗೂ ಸನ್ಮಂಗಲವಾಗಲಿ ಎಂದು ಹಾರೈಸಿದರು.
ಶ್ರದ್ಧಾ ಭಕ್ತಿಯಿಂದ ಚಾರೋಡಿ ಮೇಸ್ತ ಸಮಾಜದವರು ದೇವಸ್ಥಾನದಲ್ಲಿ ವಿಶೇಷ ಸೇವೆಯನ್ನು ಮಾಡಿಕೊಂಡು ಬಂದಿರುವುದು ಸಂತೋಷದ ವಿಷಯ. ನಾಗ ದೇವರ ಆರಾಧನೆಯನ್ನು ಮಾಡುವ ಪದ್ಧತಿಯನ್ನು ಹಿಂದಿನವರು ಪ್ರಾರಂಭ ಮಾಡಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಅನುಸರಿಸಿಕೊಂಡು ಬಂದಿದ್ದಾರೆ. ಇದರಿಂದ ವಿಶೇಷವಾದ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದು ಅವರು ಆಶೀರ್ವದಿಸಿದರು.
ಇಂದು ಬೆಳಿಗ್ಗೆ ಮೀನ ಲಗ್ನ ಸುಮುಹೂರ್ತದಲ್ಲಿ ಅಷ್ಟಬಂಧ ಪುರ:ಸರ ಶ್ರೀ ನಾಗ ದೇವರ ಪ್ರತಿಷ್ಠೆ, ಜೀವಕುಂಭಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ, ಕಲಶಾಧಿವಾಸ ಹೋಮ, ತತ್ವಹೋಮ, ಪ್ರಾಯಶ್ಚಿತ್ತ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ತಂತ್ರಿ ಬಲರಾಮ ಸೋಮಯಾಜಿ ಕೋಟ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಅಡಿಗ ನಾಯಕವಾಡಿ ಮತ್ತು ವೈದಿಕರಿಂದ ನೆರವೇರಿತು.
ದೇವಸ್ಥಾನದ ಅರ್ಚಕ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಗಣಪತಿ ವಿ.ಮೇಸ್ತ, ಕಾರ್ಯದರ್ಶಿ ರಾಘವೇಂದ್ರ ವಿ.ಮೇಸ್ತ, ದೇವಸ್ಥಾನದ ಸೇವಾ ಸಮಿತಿ ಸದಸ್ಯರು, ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಮಹಿಳ ಮಂಡಳಿ ಸದಸ್ಯರು, ಭಕ್ತಾದಿಗಳು, ಚಾರೋಡಿ ಮೇಸ್ತ ಸಮಾಜ ಬಾಂಧವರು ಮೊದಲಾದವರು ಉಪಸ್ಥಿತರಿದ್ದರು.
ಉಮೇಶ್ ಮೇಸ್ತ ಸ್ವಾಗತಿಸಿದರು. ರಾಘವೇಂದ್ರ ವಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.