ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮುಸಲ್ಮಾನ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ತಿಂಗಳ ಈದ್-ಉಲ್-ಫಿತರ್ ಹಬ್ಬವನ್ನು ಗಂಗೊಳ್ಳಿಯಲ್ಲಿ ಮುಸಲ್ಮಾನ್ ಬಾಂಧವರು ಶಾಂತಿಯುತವಾಗಿ ಸಂಭ್ರಮ ಹಾಗೂ ಸಡಗರದಿಂದ ಸೋಮವಾರ ಆಚರಿಸಿದರು.
ಮುಸಲ್ಮಾನ ಬಾಂಧವರು ಮೆರವಣಿಗೆ ಮೂಲಕ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗಂಗೊಳ್ಳಿಯ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಮುಝಮ್ಮಿಲ್ ಸಾಹೇಬ್ ನದ್ವಿ, ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಮೌಲಾನಾ ಅಬ್ದುಲ್ ಕರೀಮ್ ಸಾಹೇಬ್ ನದ್ವಿ, ಶಾಹಿ ಜುಮ್ಮಾ ಮಸೀದಿಯಲ್ಲಿ ಮೌಲಾನಾ ರಹಮತುಲ್ಲಾ ಕೋಲ್ಕಾರ್ ನದ್ವಿ ಹಾಗೂ ಸುಲ್ತಾನ್ ಮಸೀದಿಯಲ್ಲಿ ಮೌಲಾನಾ ಶರೀಫ್ ಸಅದಿ, ಮಸ್ಜಿದೆ ಅಹ್ಲೆ ಹದೀಪ್ ಮಸೀದಿಯಲ್ಲಿ ಮೌಲಾನಾ ಎಂ.ಎಚ್.ತೌಸೀಫ್ ಉಮರಿ ನೇತೃತ್ವದಲ್ಲಿ ಪ್ರಾರ್ಥನೆ ಹಾಗೂ ಧಾರ್ಮಿಕ ಆಚರಣೆಗಳು ನಡೆಯಿತು. ಶಾಹಿ ಮಸೀದಿ, ಅಹ್ಲೆ ಹದೀಪ್ ಮಸೀದಿ ಹಾಗೂ ಜಾಮೀಯಾ ಮೊಹಲ್ಲಾದ ಮದಸರದಲ್ಲಿ ಮಹಿಳೆಯರು ನಮಾಜ್ ಮಾಡಿದರು. ಪರಸ್ಪರ ಆಲಂಗಿಸಿಕೊಂಡು ಶುಭಾಶಯವನ್ನು ವಿನಿಮಯ ಮಾಡಿಕೊಂಡ ಮುಸಲ್ಮಾನ ಬಾಂಧವರು ಈದ್ ಶುಭಾಶಯವನ್ನು ಹಂಚಿಕೊಂಡರು.
ಕುಂದಾಪುರ ಡಿವೈಎಸ್‍ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಹರೀಶ್ ಆರ್. ಮತ್ತು ಬಸವರಾಜ್ ಕನಶೆಟ್ಟಿ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಗಂಗೊಳ್ಳಿಯ ವಿವಿಧೆಡೆ ಬಿಗು ಪೊಲೀಸ್ ಬಂದೋಬಸ್ತ್ ಮಾಡಿದ್ದರು.