ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎಂಟನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಮುದ್ಯತಾ ಸಂಸ್ಥೆ ಇದೀಗ ಸೀ ಶೋರ್ ಇವೆಂಟ್ ಮೂಲಕ ಹೊಸ ಅವಕಾಶಗಳನ್ನು ಪ್ರವಾಸಿಗರಿಗೆ ಮತ್ತು ಆಹಾರ ಪ್ರಿಯರಿಗೆ ಒದಗಿಸಿ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕೋಟದ ಉದ್ಯಮಿ ಆನಂದ ಸಿ ಕುಂದರ್ ಹೇಳಿದರು. ಅವರು ತೆಕ್ಕಟ್ಟೆ ಸಮೀಪದ ಕೊರವಡಿಯಲ್ಲಿ ಸಮುದ್ಯತಾ ಸಂಸ್ಥೆ ನೂತನವಾಗಿ ಆರಂಭಿಸಿದ ಸೀಶೋರ್ ಇವೆಂಟ್ ಎನ್ನುವ ಸಂಸ್ಥೆಯನ್ನು ಭಾನುವಾರ ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಮುದ್ಯತಾ ಸಂಸ್ಥೆಯ ಯಶಸ್ಸಿಗೆ ನಾಗೇಂದ್ರ ಕಾಂಚನ್ ಅವರ ತಂಡ ನಡೆದು ಬಂದ ದಾರಿಯನ್ನ ನೆನಪಿಟ್ಟುಕೊಂಡು ಮುಂದುವರಿಯುತ್ತಿರುವುದೇ ಕಾರಣ. ಆಧುನಿಕ ಜನರ ಅಭಿಲಾಷೆಗೆ ತಕ್ಕಂತೆ ಓಪನ್ ಲಾನ್ ಕಾಟೇಜ್ ಗಳು, ವಿವಿಧ ಒಳಾಂಗಣ ಕ್ರೀಡೆಗಳು, ಸಂಸ್ಕೃತಿಯ ಪ್ರತೀಕವಾಗಿ ನಿರ್ಮಿಸಲಾದ ತೊಟ್ಟಿ ಮನೆ ಮೊದಲಾದವುಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಮತ್ತು ಸಂತೃಪ್ತಿಗೊಳಿಸುವಲ್ಲಿ ಯಶಸ್ವಿಯಾಗಲಿದೆ ಎಂದರು.
ಚಾರ್ಟೆಡ್ ಅಕೌಂಟೆಂಟ್ ಪದ್ಮನಾಭ ಕಾಂಚನ್, ಬಂಗೇರ ಓವರ್ಸೀಸ್ ಫ್ಯಾಕ್ಟರಿಯ ರಾಜೇಶ್ ಬಂಗೇರ, ಕೋಟೇಶ್ವರದ ಎಲ್ ಜಿ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕಿ ಹರ್ಷಾ ಕಾಮತ್, ಮಂಗಳೂರಿನ ಕಾರು ಡೆಕೋ ಮಾಲಕ ಕುಶಲ್ ಹೆಗಡೆ, ಕುಂಭಾಶಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಮೊಗವೀರ, ಕೋಟ-ಪಡುಕೆರೆ ಉದ್ಯಮಿ ರಮೇಶ್ ಎಚ್ ಕುಂದರ್, ಸಮುದ್ಯತಾ ಸಂಸ್ಥೆಯ ಯೋಗೇಂದ್ರ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಕೊರವಡಿ ಬೀಚ್ ರಸ್ತೆಯಲ್ಲಿರುವ ಸೀಶೋರ್ ಇವೆಂಟ್, ಆಹಾರ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಿಗುವ ತೆಕ್ಕಟ್ಟೆಯಿಂದ ಪಶ್ಚಿಮಕ್ಕೆ ಸುಮಾರು 3 ಕಿ.ಮೀ ಸಮುದ್ರದ ಬದಿಗೆ ಸಂಚರಿಸಿದಾಗ ಹೊಸ ಇವೆಂಟ್ ಕಾಣಸಿಗುತ್ತದೆ.
ಸಮುದ್ಯತಾ ಟಿ.ಎನ್.ಎನ್ ಸೂಟ್ಸ್ ವೆಂಕಟೇಶ್ ಸೀಶೋರ್ ಇವೆಂಟ್ ನಲ್ಲಿ ಸೌಪರ್ಣಿಕ, ವಾರಾಹಿ, ಕೇದಕ, ಚಕ್ರ ಹಾಗೂ ಕುಬ್ಜ ಎಂಬ ಹೆಸರಿನ ಐದು ವಿಶೇಷ ರೀತಿಯ ಕೋಟೆಜುಗಳನ್ನು ಹೊಂದಿದೆ, ಇದಕ್ಕೆ ತಾಗಿಕೊಂಡೆ ವಿಶಾಲವಾದ ತೆರೆದ ಹುಲ್ಲುಗಾವಲಿನ ಮನೆ. ಜೊತೆಗೆ ರೈನ್ ಡಾನ್ಸ್, ಬೀನ್ ಬ್ಯಾಗ್ ಕಾನ್ಸೆಪ್ಟ್ ಸಿನಿಮಾ, ಓಪನ್ ಲಾನ್, ಹಳೆಯ ಕಾಲದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ತೊಟ್ಟಿ ಮನೆ, ಚದುರಂಗ ಮುಂತಾದ ಒಳಾಂಗಣ ಕ್ರೀಡೆಗಳು ಹಾಗೂ ಇನ್ನಿತರ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ.
ಆಕಾಶ್ ಹೆಬ್ಬಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಮುದ್ರದ ಸಂಸ್ಥೆಯ ಸದಸ್ಯ ಸಂದೀಪ್ ಶೆಟ್ಟಿ ವಂದಿಸಿದರು.