ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಎಚ್.ಎಸ್ ಶೆಟ್ಟಿಯವರ ಮಹತ್ವಕಾಂಕ್ಷೆಯ 100 ಕೊರಗ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಯ ಅಂಗವಾಗಿ ಈಗಾಗಲೇ ಜನ್ನಾಡಿಯಲ್ಲಿ 2 ಕೋಟಿಗೂ ಹೆಚ್ಚು ವೆಚ್ಚದಲ್ಲಿ 14 ಸುಂದರವಾದ ಮನೆಗಳ ನಿರ್ಮಾಣ ಮಾಡಿ ಕಳೆದ ನವಂಬರ್ ತಿಂಗಳಲ್ಲಿ ಹಸ್ತಾಂತರ ಮಾಡಲಾಗಿದೆ. ಎರಡನೇ ಹಂತದಲ್ಲಿ ಉಳ್ಳೂರು 74 ಗ್ರಾಮದ ಕೊರಗ ಕಾಲೋನಿಯಲ್ಲಿ 14 ಕೊರಗ ಕುಟುಂಬಗಳಿಗೆ ಸುಮಾರು 2.5 ಕೋಟಿ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಏಪ್ರಿಲ್ 7 ಸೋಮವಾರ ಬೆಳಿಗ್ಗೆ 10-30ಕ್ಕೆ ನಡೆಯಲಿದೆ ಎಂದು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಹಾಲಾಡಿ ನಾಗರಾಜ ಶೆಟ್ಟಿ ತಿಳಿಸಿದರು.
ಅವರು ಶನಿವಾರ ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಏ.7ರಂದು ನಡೆಯುವ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ಮತ್ತು ಶಿಲಾನ್ಯಾಸವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸಮಾಜಕಲ್ಯಾಣ ಸಚಿವರಾದ ಹೆಚ್.ಸಿ ಮಹಾದೇವಪ್ಪ ಉದ್ಘಾಟಿಸಲಿದ್ದಾರೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಭ ಸಂದೇಶ ನೀಡಲಿದ್ದಾರೆ. ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಯಕ್ಷಗಾನ ಕಲಾ ರಂಗ ಉಡುಪಿ ಇದರ ಕಾರ್ಯದರ್ಶಿ ಮುರಳಿ ಕಡೇಕಾರ್, ಕರ್ನಾಟಕ ಮತ್ತು ಕೇರಳದ ಕೊರಗಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಸುಶೀಲ ನಾಡ, ಉಳ್ಳೂರು 74 ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ., ಬೆಂಗಳೂರು ಶಿಕ್ಷಣ, ಸಮಾಜ ಸೇವೆ, ಧಾರ್ಮಿಕ ಕ್ಷೇತ್ರಕ್ಕೆ ಅಗಾಧವಾದ ಕೊಡುಗೆ ನೀಡುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಬ್ರಹ್ಮಾವರ ಸರಕಾರಿ ಶಾಲೆಗಳು ಹಾಗೂ ಪದವೀಪೂರ್ವ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಇಲಾಖೆಯೊಂದಿಗೆ ಟ್ರಸ್ಟ್ ಒಡಂಬಡಿಕೆ ಮಾಡಿಕೊಂಡು ಸುಮಾರು 3 ಕೋಟಿ ವೆಚ್ಚದಲ್ಲಿ ಈಗಾಗಲೇ ಮೂಲಭೂತ ಸೌಕರ್ಯವನ್ನು ಒದಗಿಸಿದೆ. 2023-24ನೇ ಸಾಲಿನಲ್ಲಿ ವಿದ್ಯಾರ್ಥಿ ಸಮುದಾಯದ ಅಭ್ಯುದಯ ಹಲವಾರು ಚಟುವಟಿಕೆಗಳಿಗೆ ಈಗಾಗಲೇ ಏಳು ಕೋಟಿ ರೂ ದೇಣಿಗೆ ನೀಡಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಾಮಾಜಿಕ ಕಾರ್ಯಕರ್ತ ಚಿಟ್ಟೆ ರಾಜಗೋಪಾಲ ಹೆಗ್ಡೆ , ಎಂ.ಎಂ.ಸಿ.ಎಲ್ ಸಂಸ್ಥೆ ಸಿಬ್ಬಂದಿ ದಿಲೀಪ್, ಉಳ್ಳೂರು 74 ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಅಮಾಸೆಬೈಲು ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು.