ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶಿಕ್ಷಣ ಕ್ಷೇತ್ರದಲ್ಲಿ ಇವತ್ತು ಆರೋಗ್ಯಕರವಾದ ಸ್ಪರ್ಧೆಯನ್ನು ಕಾಣುತ್ತಿದ್ದೇವೆ. ಇದು ಅವಶ್ಯಕವೂ ಕೂಡಾ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಸಮಸ್ಯೆಗಳು ಬಂದಾಗ ಪರಿಹರಿಸುವ ನಿಟ್ಟಿನಲ್ಲಿ ಇಂಥಹ ಸಂಸ್ಥೆಗಳ ಹೊಣೆಗಾರಿಕೆ ಸ್ತುತ್ಯರ್ಹವಾದುದು. ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಎಲ್ಲರ ಜವಬ್ದಾರಿಯಾಗಿದ್ದು, ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಲು ದಾನಿಗಳು, ಸಂಸ್ಥೆಗಳು ಮುಂದಾಗ ಅದನ್ನು ಸದುಪಯೋಗ ಪಡಿಸಿಕೊಂಡು ಶ್ರಮಿಸಲು ಶಿಕ್ಷಕರು, ಎಸ್.ಡಿ.ಎಂ.ಸಿ ಒಂದು ತೀರ್ಮಾನಕ್ಕೆ ಬರಬೇಕು. ಸರಕಾರಿ ಶಾಲೆಗಳ ಬೆಳವಣಿಗೆ ಮೇಲ್ಪಂಕ್ತಿಯಲ್ಲಿ ಸಾಗಬೇಕು ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಚಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ ಉಡುಪಿ ಜಿಲ್ಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೈಂದೂರು ವಲಯ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಎಸ್.ಡಿ.ಎಮ್.ಸಿ. ಸಾಮರ್ಥ್ಯವರ್ದನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೃಷ್ಣಮೂರ್ತಿ ಮಂಜರು ಈ ಭಾಗದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಸರಕಾರಿ ಶಾಲೆಯ ಬಗ್ಗೆ ಆಸಕ್ತಿಯಿಂದ ಕೆಲಸ ಮಾಡುವ ರವಿ ಶೆಟ್ಟಿಯಂತವರನ್ನು ಸನ್ಮಾನಿಸುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಡಾ. ರಾಜೇಶ್ ಬಾಯರಿ ವಹಿಸಿದ್ದರು.
ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆಯ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ನಿರ್ದೇಶಕ ಅಬ್ದುಲ್ ಸಲಾಂ, ಚಿತ್ತೂರು ಪ್ರಾಸ್ತಾವಿಕ ಮಾತನಾಡಿ, ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ ಜಿಲ್ಲಾಮಟ್ಟದಲ್ಲಿ ಉತ್ತಮ ಕೆಲಸ ಮಾಡಿ ಇವತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. 2010ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜ್ಯಾರಿ ಆದ ನಂತರ ಎಸ್.ಡಿ.ಎಂ.ಸಿ ಬಲಗೊಳಿಸುವ ದ್ಯೇಯ ನಮ್ಮ ವೇದಿಕೆ ಇಟ್ಟುಕೊಳ್ಳುತ್ತದೆ. 2015ರ ನಂತರ ಸಕ್ರಿಯವಾಗಿ 35 ಶೈಕ್ಷಣಿಕ ಜಿಲ್ಲೆಯಲ್ಲಿ 224 ವಲಯದ 48ಸಾವಿರ ಸರಕಾರಿ ಶಾಲೆಯ 8.5ಲಕ್ಷ ಎಸ್.ಡಿ.ಎಂ.ಸಿ ಸದಸ್ಯರಿಗೆ ತರಬೇತಿಗೊಳಿಸಿ ಸರಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ಮಾಡುತ್ತಿದೆ. 2020ನಂತರ ಉಡುಪಿ ಜಿಲ್ಲೆಯಲ್ಲಿ ವಠಾರ ಶಿಕ್ಷಣ ಕಲ್ಪನೆಯ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಿ, ಪರಿಣಾಮಕಾರಿ ಅನುಷ್ಟಾನಕ್ಕೆ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ 2023-24ನೇಯ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಸ್ತಿಯನ್ನು ಚಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ/ಪ್ರೌಢ ಶಾಲೆಯ ನಿಕಟಪೂರ್ವ ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿರಾಜ್ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
ಉಡುಪಿ ಮಿತ್ರ ಸಂಪಾದಕ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯ ಅವರಿಗೆ ಗೌರವ ಅಭಿನಂದನೆ ನೀಡಿ ಗೌರವಿಸಲಾಯಿತು.
ಕೋಟೇಶ್ವರ ಗೀತಾ ಎಚ್.ಎಸ್.ಎನ್. ಫೌಂಡೇಶ್ ನ ಅಧ್ಯಕ್ಷ ಶಂಕರ್ ಐತಾಳ್, ಮಾರಣಕಟ್ಟೆ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರರು ವಂಡಬಳ್ಳಿ ಜಯರಾಮ ಶೆಟ್ಟಿ, ವಂಡ್ಸೆ ವಲಯದ ಜನಜಾಗೃತಿ ಸಮಿತಿಯ ಅಧ್ಯಕ್ಷ ಡಾ. ಅತುಲ್ ಕುಮಾರ್ ಶೆಟ್ಟಿ, ಸಿ.ಅರ್.ಪಿ. ವಂಡ್ಸೆ ಕ್ಲಸ್ಟರ್ ನಾಗರಾಜ್ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಉದಯ ಜಿ.ಪೂಜಾರಿ, ಚಿತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಮುಖ್ಯೋಪಾಧ್ಯಾಯರು ಗೋವಿಂದ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಯ ಸಾಧಿಕ್ ಮಾವಿನಕಟ್ಟೆ, ಬಾಲಕೃಷ್ಣ ಪೂಜಾರಿ, ಉಷಾ ರಮೇಶ್, ಜಗನ್ನಾಥ ಶೆಟ್ಟಿ, ವೀಣಾ ಭಂಡಾರಿ, ಅಶ್ಪಕ್ ಮೂಡುಗೋಪಾಡಿ, ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.
ಚಿತ್ತೂರು ಶಾಲಾ ವಿದ್ಯಾರ್ಥಿಗಳು ಪಾರ್ಥನೆಗೈದರು. ಕುಂದಾಪುರ ಘಟಕದ ಅಧ್ಯಕ್ಷ ಎಸ್. ವಿ.ನಾಗರಾಜ್ ಸ್ವಾಗತಿಸಿ, ವಂದಿಸಿದರು. ಶೋಭಾ ಶಾಂತಾರಾಜ್ ಕಾರ್ಯಕ್ರಮ ನಿರೂಪಿಸಿದರು.