ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಖಂಡಿಸಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ನಡೆಸುವ ಸಂಬಂಧ ಶಾಸಕರಾದ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಗ್ಯಾರಂಟಿ ಯೋಜನೆಗಳ ಅಸಮರ್ಪಕ ಅನುಷ್ಠಾನದಿಂದ ದಿನೇದಿನೇ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈಗಾಗಲೇ ಹಾಲಿನ ದರ ಏರಿಕೆ ಮಾಡಲಾಗಿದೆ, ಡೀಸೆಲ್ ಸುಂಕ ಏರಿಕೆ ಮಾಡಿದ್ದಾರೆ. ಬಸ್ ದರ ಏರಿಕೆಯಾಗಿದೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರದ ಬೆಲೆ ಏರಿಕೆ ಧೋರಣೆಯಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಹಾಗೂ ಜಿಲ್ಲಾ ಬಿಜೆಪಿ ಸೂಚನೆಯಂತೆ ರಾಜ್ಯ ಸರ್ಕಾರದ ವಿರುದ್ಧ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೃಹತ್ ಹೋರಾಟ ಹಾಗೂ ಪಾದಯಾತ್ರೆ ಹಮ್ಕಿಕೊಳ್ಳಲಿದ್ದೇವೆ. ಬಿಜೆಪಿ ನಾಯಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಸಂಘಟಿತ ಹೋರಾಟದ ಮೂಲಕ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ದೊಡ್ಡ ಜನಾಂದೊಲನ ರೂಪಿಸಬೇಕಿದೆ. ಎಲ್ಲ ಬೂತ್ ಗಳಿಂದಲೂ ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು ಬರುವಂತೆ ಮಾಡಬೇಕು ಎಂದೆ ಕರೆ ಕೊಟ್ಟರು. ಬೈಂದೂರು ಹೋಬಳಿ ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.