ಕಲಿ ಕಲಿಸು ಕಲಾ ಆಂತರ್ಗತ ಕಲಿಕಾ ಯೋಜನೆಯ ಬಣ್ಣದ ಗರಿ ಮಕ್ಕಳ ಯಕ್ಷೋತ್ಸವ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಬೆಂಗಳೂರು, ಇಂಡಿಯಾ ಪೌಂಡೇಷನ್ ಫಾರ್ ಆರ್ಟ್ಸ್ ಬೆಂಗಳೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಇವರ ಸಹಯೋಗದಲ್ಲಿ ಕಲಿ ಕಲಿಸು ಕಲಾ ಅಂತರ್ಗತ ಕಲಿಕೆಯ “ಕರಾವಳಿಯ ವೀರ ವನಿತೆಯರು ಸಾಮಾಜಿಕ ಶೋಷಣೆ ಮತ್ತು ವಿದೇಶಿಯರ ವಿರುದ್ಧ ಹೋರಾಡಿ ನಾಡು ಕಟ್ಟಿದ ಕಥನಕ್ಕೆ ಯಕ್ಷರಂಗ ರೂಪ ನೀಡಿ ಶಾಲಾ ವಿದ್ಯಾರ್ಥಿನಿಯರಿಂದ ಅಭಿನಯಿಸುವುದು” ಎಂಬ ಯೋಜನೆಯ ಸಮಾರೋಪವು ಎ.8ರಂದು ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಯಿಂದ “ಬಣ್ಣದ ಗರಿ” ಮಕ್ಕಳ ಯಕ್ಷೋತ್ಸವದಲ್ಲಿ ಕರಾವಳಿ ವೀರ ವನಿತೆಯರ ಕಥನವಾಗಿ ಪ್ರದರ್ಶನಗೊಂಡಿತು.
ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಂಕರನಾರಾಯಣ ಭಟ್ ಕೊಂಡಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ʼಚಿಂತನ ಚಾವಡಿʼ ಸಭಾ ಸಂಭ್ರಮವನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ರೆಡ್ ಕ್ರಾಸ್ ಕುಂದಾಪುರ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಸಾಹಿತಿಗಳು ಮತ್ತು ಚಿಂತಕರಾದ ಪೂರ್ಣಿಮಾ ಭಟ್ ಕಮಲಶಿಲೆಯವರು ಮಕ್ಕಳನ್ನು ಬೆಳೆಸುವಲ್ಲಿ ತಾಯಂದಿರ ಪಾತ್ರ ಎನ್ನುವ ವಿಚಾರದ ಕುರಿತು ಮಾತನಾಡುತ್ತ “ಮಗು ಯಾವ ಮಾಧ್ಯಮದಲ್ಲಿ ಕಲಿತರು ಕಲಿಕೆಯನ್ನು ಅರ್ಥೈಸಿಕೊಳ್ಳುವುದು ತನ್ನ ಮಾತೃಭಾಷೆಯಲ್ಲಿ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಿದ ಶಾಲಾ ಅಡುಗೆಯವರಾದ ಸಾಕು ಪೂಜಾರಿ, ಸ್ವಯಂ ನಿವೃತ್ತಿ ಪಡೆದ ಆಶಾ, ಯಕ್ಷಗುರು ಕಿಶೋರ ಕುಮಾರ ಆರೂರು, ಗೌರವ ಶಿಕ್ಷಕಿಯರಾದ ನಯನ, ಶ್ರೀಮತಿ, ಪ್ರಮೀಳಾ, ವೈಶಾಲಿ ಶೆಟ್ಟಿ, ವಿಶಲಾಕ್ಷಿಯರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶಂಕರನಾರಾಯಣ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವತ್ಸಲಾ ಶೆಟ್ಟಿ, ಸದಸ್ಯರಾದ ಲಕ್ಷ್ಮಿ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಆಶಾಲತ ಶಿವರಾಮ ಶೆಟ್ಟಿ, ಶಂಕರನಾರಾಯಣ ಕ್ಯಾಶು ಇಂಡಸ್ಟ್ರೀಸ್ ಬೈಲೂರು ಇದರ ಮಾಲಕರಾದ ಶಶಿಧರ ಶೆಟ್ಟಿ, ಮಾಜಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸುಬ್ರಹ್ಮಮಣ್ಯ ಐತಾಳರು, ಸಂತೋಷ ಕುಮಾರ ಬೈಲೂರು , ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಂಜುನಾಥ ಮೊಗವೀರ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕರಾದ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಪ್ರಸ್ತಾವನೆಗೈದರು. ಬಳ್ಕೂರು ಶಾಲಾ ಸಹ ಶಿಕ್ಷಕ ಸಂತೋಷ ಕಾರ್ಯಕ್ರಮ ನಿರೂಪಿಸಿದರು. ಮತ್ತು ಶಾಲಾ ಸಹಶಿಕ್ಷಕಿ ಸಂಧ್ಯಾ ಕೆ. ಕಾರ್ಯಕ್ರಮ ನಿರೂಪಣೆಗೆ ಸಹಕರಿಸಿ ವಂದನೆಯನ್ನು ಸಲ್ಲಿಸಿದರು. ಗೌರವ ಶಿಕ್ಷಕಿಯರಾದ ನಯನ, ಶ್ರೀಮತಿ, ಪ್ರಮೀಳಾ, ವೈಶಾಲಿ ಶೆಟ್ಟಿ, ವಿಶಲಾಕ್ಷಿ ಸಹಕರಿಸಿದರು.
ನಂತರ ನಡೆದ ಮಕ್ಕಳ ಯಕ್ಷೋತ್ಸವದಲ್ಲಿ ಕರಾವಳಿ ವೀರ ವನಿತೆಯರ ಕಥನವನ್ನು ಯಕ್ಷಸಿರಿ ಶಂಕರನಾರಾಯಣದ ಸಂಚಾಲಕರಾದ ಕಿಶೋರ ಕುಮಾರ ಆರೂರು ಇವರ ನಿರ್ದೇಶನದಲ್ಲಿ 4 ಮತ್ತು 5ನೇ ತರಗತಿ ಮಕ್ಕಳು ನಂಗೇಲಿ ಕಥನವನ್ನು ನೃತ್ಯರೂಪಕವಾಗಿಯೂ, 5ನೇ ತರಗತಿ ವಿದ್ಯಾರ್ಥಿಗಳು ಕಮಲಾದೇವಿ ಚಟ್ಟೋಪಾಧ್ಯಯ ಕಥನವನ್ನು ತಾಳಮದ್ದಳೆಯಾಗಿಯೂ, 6ನೇ ತರಗತಿ ವಿದ್ಯಾರ್ಥಿಗಳು ರಾಣಿ ಚೆನ್ನಾಭೈರಾದೇವಿ ಮತ್ತು 7ನೇ ತರಗತಿ ವಿದ್ಯಾರ್ಥಿಗಳು ವೀರ ರಾಣಿ ಅಬ್ಬಕ್ಕನ ಕಥನವನ್ನು ಯಕ್ಷಗಾನವಾಗಿ ಪ್ರದರ್ಶನಗೈದರು. ಭಾಗವತಿಕೆಯಲ್ಲಿ ಸುಮನ ಎನ್ , ಸತೀಶ ಬೈಲೂರು, ಮತ್ತು ಕಿಶೋರ ಕುಮಾರ ಆರೂರು, ಮದ್ದಳೆಯಲ್ಲಿ ಪ್ರಭಾಕರ ಆಚಾರ್ಯ ಮಾರಾಣಕಟ್ಟೆ, ಚಂಡೆಯಲ್ಲಿ ಭಾಸ್ಕರ್ ಆಚಾರ್ಯ ಕನ್ಯಾನ ಮತ್ತು ಮಾಸ್ಟರ್ ಪನ್ನಗ ಆರೂರು ಸಹಕರಿಸಿದರು.
ಇದರ ಜೊತೆಗೆ ಶಾಲಾ ಶಿಕ್ಷಕಿಯರ ನಿರ್ದೇಶನದಲ್ಲಿ ಹೆಜ್ಜೆ ಗೆಜ್ಜೆ ವೈವಿಧ್ಯಮಯವಾದ ನೃತ್ಯ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಡಿ ಮತ್ತು ಸಹಶಿಕ್ಷಕಿಯರ ನೆರವಿನೊಂದಿಗೆ ಕಲಿ ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ನಿರ್ದೇಶಕರಾದ ಸಹ ಶಿಕ್ಷಕ ಆನಂದ ಕುಲಾಲ ಕಾರ್ಯಕ್ರಮ ಸಂಯೋಜಿಸಿದ್ದರು.