ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಮರಾಠಿ ಸಮಾಜ, ವಲಯ ಕಂಬಳ ಸಮಿತಿ, ಜಿಲ್ಲಾ ಕಂಬಳ ಸಮಿತಿ ಸಹಕಾರದೊಂದಿಗೆ ಬೈಂದೂರು ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಕೋಟಿ ಚೆನ್ನಯ್ಯ ಜೋಡುಕೆರೆ ‘ಬೈಂದೂರು ಕಂಬಳ’ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯ ನಗು ಸಿಟಿ ಮೈದಾನದಲ್ಲಿ ಎ.17ರಿಂದ 20ರವರೆಗೆ ನಡೆಯಲಿದೆ ಎಂದು ಬೈಂದೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ದೀಪಕ್‍ಕುಮಾರ ಶೆಟ್ಟಿ ಹೇಳಿದರು.
ಮುಳ್ಳಿಕಟ್ಟೆಯ ‘ನಗು ಸಿಟಿ’ ಮೈದಾನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.17ಮತ್ತು 18ರಂದು ರಂದು ಸಂಜೆ 5 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 19ರಂದು ಸಂಜೆ 5 ಗಂಟೆಯಿಂದ 20ರ ಮಧ್ಯಾಹ್ನದವರೆಗೆ ಹೊನಲು ಬೆಳಕಿನ ಜೋಡುಕೆರೆ ಕಂಬಳ ನಡೆಯಲಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಸುಮಾರು 200 ಜೋಡಿ ಕೋಣಗಳು ಕಂಬಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ಜಿಲ್ಲೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸುಮಾರು 60-70 ಸಾವಿರ ಮಂದಿ ಈ ಐದು ದಿನಗಳ ಕಾರ್ಯಕ್ರಮದಲ್ಲಿ ಸೇರುವ ಸಾಧ್ಯತೆ ಇದೆ. ಜೋಡುಕೆರೆ ಕಂಬಳದ ಕೆರೆ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಪೂರ್ವ ತಯಾರಿಗಳು ನಿರೀಕ್ಷೆಯಂತೆ ನಡೆಯುತ್ತಿದೆ. ಕಂಬಳದ ಅಭಿಮಾನಿಗಳಿಗೆ ಹಾಗೂ ಆಗಮಿಸುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಿದ್ಧತೆಗಳು ನಡೆಯುತ್ತಿದ್ದು, ಜಾತಿ, ಮತ, ಪಕ್ಷಬೇಧ ಇಲ್ಲದೆ ಎಲ್ಲರೂ ಒಟ್ಟಾಗಿ ಬೈಂದೂರ ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದರು.
ಕಂಬಳವೂ ಸೇರಿ ಐದು ದಿನಗಳ ಕಾಲ ವಿವಿಧ ಕ್ಷೇತ್ರಗಳ ಉತ್ಸವ, ಆಹಾರ-ವಾಣಿಜ್ಯ ಮೇಳ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಪಕ್ಷಾತೀತವಾಗಿ ನಡೆಯುವ ಈ ಸಾಂಸ್ಕೃತಿಕ ಹಾಗೂ ಪಾರಂಪರಿಕಾ ಉತ್ಸವದಲ್ಲಿ ನಾಡಿನ ಅನೇಕ ಗಣ್ಯರನ್ನು ಭಾಗವಹಿಸಲು ವಿನಂತಿ ಮಾಡಲಾಗಿದ್ದು, ಎಲ್ಲರೂ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಉತ್ತಮವಾಗಿ ಕಂಬಳವನ್ನು ನಡೆಸುವ ಸಂಕಲ್ಪ ಮಾಡಲಾಗಿದೆ ಎಂದರು.
ಬೈಂದೂರು ಮರಾಠಿ ಸಮಾಜ ಸುಧಾಕರ ಸಂಘದ ಅಧ್ಯಕ್ಷ ಭೋಜ ನಾಯ್ಕ್, ಮಂಗೇಶ ಶ್ಯಾನುಭಾಗ್, ಅನೂಪ್ ಬೈಂದೂರು, ವಿಶ್ವನಾಥ ಶೆಟ್ಟಿ ಹೊಸಾಡು, ಗೋವರ್ಧನ್, ಸಂತೋಷ ಮೊಗವೀರ ಹೊಸಾಡು ಮತ್ತು ರಾಘವೇಂದ್ರ ಶೆಟ್ಟಿ ಹೊಸಾಡು ಇದ್ದರು.