ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ದೇಶದಲ್ಲಿ ಆಹಾರ ಹಣದುಬ್ಬರಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳ ಜೊತೆಗೆ ದುಡಿಯುವ ಕೈಗಳಿಗಿಂತ ಉಣ್ಣುವ ಕೈಗಳು ಹೆಚ್ಚಾಗಿರುವುದೇ ಕಾರಣ ಎಂದು ಮೈಸೂರು ಮರ್ಕಂಟೈಲ್ ಕಂಪೆನಿಯ ಚೇರ್ ಮೆನ್, ಉದ್ಯಮತಾರೆ ಡಾ. ಹೆಚ್.ಎಸ್.ಶೆಟ್ಟಿ ಹೇಳಿದ್ದಾರೆ.
ಅವರು ಕುಂದಾಪುರದ ಮುಳ್ಳಿಕಟ್ಟೆಯಲ್ಲಿರುವ ನಗುಸಿಟಿಯಲ್ಲಿ ಆರಂಭಗೊಂಡಿರುವ ಬೈಂದೂರು ಜೋಡುಕೆರೆ ಕಂಬಳದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ, ಮಾತನಾಡಿದರು.
ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಬಾಧ್ಯಕ್ಷತೆ ವಹಿಸಿದ್ದ ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ದಶಕಗಳಿಂದ ಬೈಂದೂರು ಕಂಬಳೋತ್ಸವ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಮುಳ್ಳಿಕಟ್ಟೆಯಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡುಕೆರೆ ಕಂಬಳ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಜೋಡುಕೆರೆ ಕಂಬಳ ನಡೆಸಲಾಗುತ್ತದೆ. ಆ ಮೂಲಕ ಗ್ರಾಮೀಣ ಕ್ರೀಡೆಗೆ ಒತ್ತು ನೀಡಲಾಗುತ್ತದೆ ಎಂದರು.
ಇದೇ ಸಂದರ್ಭ ಡಾ. ಹೆಚ್.ಎಸ್. ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ಜನತಾ ಪಿಯು ಕಾಲೇಜು ಹೆಮ್ಮಾಡಿ ಇವರ ವಿದ್ಯಾರ್ಥಿಗಳಿಂದ ಹಾಗೂ ಅರೆಹೊಳೆ ಪ್ರತಿಷ್ಟಾನದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.