ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಶಿವಮೊಗ್ಗ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಬೈಂದೂರು ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಕರ್ನಾಟಕ ರಾಜ್ಯದಲ್ಲಿ 2ನೇ ಅತೀ ಹೆಚ್ಚು ಆದಾಯಗಳಿಸುವ ದೇವಸ್ಥಾನವಾಗಿದ್ದು, ಭಾರತದ ವಿವಿಧ ರಾಜ್ಯಗಳಿಂದ ಹಾಗೂ ಹೊರ ದೇಶಗಳಿಂದ ಪ್ರತಿದಿನ ಹತ್ತು ಸಾವಿರಕ್ಕೂ ಹೆಚ್ಚು ಯಾತಾರ್ಥಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದರಿಂದ, ಬೈಂದೂರಿನಲ್ಲಿ ವಿಮಾನ ನಿಲ್ದಾಣವನ್ನು ಮಂಜೂರು ಮಾಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಸಂಸದರಾದ ಬಿ ವೈ. ರಾಘವೇಂದ್ರರವರು ಈ ಹಿಂದೆಯೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಅದಕ್ಕೆ ರಾಜ್ಯ ಸರ್ಕಾರದಿಂದ ಜಮೀನು ಹಸ್ತಾಂತರ ಹಾಗೂ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಬಂದಲ್ಲಿ ಶೀಘ್ರವಾಗಿ ವಿಮಾನ ನಿಲ್ದಾಣ ಮಂಜೂರು ಮಾಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ತಿಳಿಸಿರುವ ಮೇರೆಗೆ ಬೈಂದೂರು ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದ ಅತೀ ಸಮೀಪವಿರುವ ಒತ್ತಿನೆಣೆಯಲ್ಲಿ ಸುಮಾರು 500 ಎಕರೆಗೂ ಅಧಿಕ ಅರಣ್ಯ ಇಲಾಖೆಯ ವಿಸ್ತರಣಾ ಬ್ಲಾಕ್ ನ ಸ್ಥಳ ಲಭ್ಯವಿದ್ದು, ಅಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿದರೆ ಭಕ್ತಾಧಿಗಳಿಗೆ ಸಾಕಷ್ಟು ಅನುಕೂಲವಾಗಲಿದ್ದು, ಈಗಾಗಲೇ ಕೆ.ಎಸ್.ಐ.ಐ.ಡಿ.ಸಿ ವತಿಯಿಂದ ಸರ್ವೆ ಕಾರ್ಯ ನಡೆದು ಉಡುಪಿ ಜಿಲ್ಲಾಧಿಕಾರಿಗಳಿಂದ ದಾಖಲೆಗಳನ್ನು ಪಡೆದುಕೊಳ್ಳಲಾಗಿದ್ದು, ಆದಷ್ಟು ಬೇಗ ವಿಮಾನ ನಿಲ್ದಾಣಕ್ಕೆ ಅತೀ ಜರೂರಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಇಂದು ಶಿವಮೊಗ್ಗ ಸಂಸದರಾದ ಶ್ರೀ ಬಿ.ವೈ ರಾಘವೇಂದ್ರರವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅವರೊಂದಿಗೆ ವಿವರವಾಗಿ ಚರ್ಚಿಸಿ ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಜಮೀನು ಹಸ್ತಾಂತರ ಹಾಗೂ ಅಗತ್ಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.