ಕುಂದಾಪುರ :ಕುಡಿಯುವ ನೀರಿನ ಸಮಸ್ಯೆ ಹಾಗೂ ಪ್ರಾಕೃತಿಕ ವಿಕೋಪದ ಮುಂಜಾಗ್ರತ ಕ್ರಮದ ಕುರಿತು ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

0
50

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೇಸಿಗೆಗಾಲದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪದ ಮುಂಜಾಗ್ರತ ಕ್ರಮದ ಕುರಿತು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷೆತೆಯಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕೆಲವೊಂದು ಗ್ರಾಮ ಪಂಚಾಯತ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಉಳಿದಂತೆ ಕೆಲವು ಗ್ರಾಪಂ.ಗಳಲ್ಲಿ ಅಷ್ಟೊಂದು ಗಂಭೀರವಾದ ಕುಡಿಯುವ ನೀರಿನ ಸಮಸ್ಯೆ ಈವರೆಗೆ ಕಂಡು ಬಂದಿಲ್ಲ. ಆದರೂ ಸ್ಥಳೀಯಾಡಳಿತ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮಳೆಗಾಲದಲ್ಲಿ ಅಪಾಯಕಾರಿ ಮರದ ಗೆಲ್ಲುಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಸಮನ್ವತೆ ಸಾಧಿಸಿ ಜನರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಬೇಕೆಂದು ಎಂದು ಸೂಚನೆ ನೀಡಿದರು.
ಕೋಟೇಶ್ವರ ಗ್ರಾಪಂ. ವ್ಯಾಪ್ತಿಯ 15 ಮನೆಗಳಿಗೆ ಬೋರ್‍ವೆಲ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಬೋರ್‍ವೆಲ್‍ನಲ್ಲಿ ನೀರು ಬತ್ತಿ ಹೋಗಿದೆ. ಯಾವುದೇ ಖಾಸಗಿ ಜಲಮೂಲ ಇಲ್ಲದಿರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕೋಟೇಶ್ವರ ಗ್ರಾಪಂ ಅಧಿಕಾರಿ ಹೇಳಿದರು.

ಬೀಜಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಪಂ ಗುಮಾಸ್ತೆ ಹೇಳಿದಾಗ, ನಿಮಗೆ ಈ ಬಗ್ಗೆ ಮಾಹಿತಿ ಇಲ್ಲ, ಪಿಡಿಒ ಅಥವಾ ಅಧ್ಯಕ್ಷರನ್ನು ಕೇಳಿ, ಬೀಜಾಡಿಯಲ್ಲಿ ನೀರಿನ ಸಮಸ್ಯೆ ಇದೆ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

Click Here

Click Here

ಗೋಪಾಡಿಯಲ್ಲಿ ಗೇಟ್‍ವಾಲ್‍ನಲ್ಲಿ ನೀರು ಸೋರಿಕೆಯಾಗುತ್ತಿದೆ. ಕುಡಿಯುವ ನೀರು ಪೂರೈಕೆ ಮಾಡುವ ಎರಡು ಪ್ರಮುಖ ಬಾವಿಗಳಲ್ಲಿ ಒಂದು ಬಾವಿಯಲ್ಲಿ ನೀರು ಬತ್ತಿ ಹೋಗಿದೆ. ವಾರಾಹಿ ನೀರು ಬಿಟ್ಟಿರುವುದರಿಂದ ಅಷ್ಟೊಂದು ಸಮಸ್ಯೆ ಇಲ್ಲ ಎಂದು ಹೇಳಿದ ಗೋಪಾಡಿ ಗ್ರಾಪಂ ಅಧ್ಯಕ್ಷರು, ಗ್ರಾಪಂ.ನ 15ನೇ ಹಣಕಾಸು ಯೋಜನೆಯಡಿ ಉಳಿಕೆ ಹಣವನ್ನು ಕುಡಿಯುವ ನೀರಿನ ವ್ಯವಸ್ಥೆಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಮತ್ತು ಶುದ್ಧ ನೀರು ಸರಬರಾಜು ಮಾಡಲು ಫಿಲ್ಟರ್ ಅಳವಡಿಸುವಂತೆ ಮನವಿ ಮಾಡಿದರು.

ಕೊರ್ಗಿಯಲ್ಲಿ ಬಾವಿಯಲ್ಲಿ ಕೆಂಪು ನೀರು ಬರುತ್ತಿದೆ. ಹೀಗಾಗಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಮಸ್ಯೆಯಾಗುತ್ತಿದೆ. ಸಾಗಿನಗುಡ್ಡೆ ಎಂಬಲ್ಲಿರುವ ಬಾವಿ ಕೂಡ ಬತ್ತಿ ಹೋಗಿದೆ. ಎರಡು ದಿನಕ್ಕೊಮ್ಮೆ 2-2 ಕೊಡಪಾನ ನೀರು ಸಿಗುತ್ತಿದೆ. ಕೊಳಕು ನೀರು ಶುದ್ಧೀಕರಿಸಲು ಫಿಲ್ಟರ್ ಅಳವಡಿಸುವಂತೆ ಕೊರ್ಗಿ ಗ್ರಾಪಂ ಅಧಿಕಾರಿ ಹೇಳಿದರು.
ಮೊಳಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಟ್ಯಾಂಕ್‍ಗಳಿಗೆ ಒಂದೇ ಪೈಪ್‍ಲೈನ್ ಮೂಲಕ ನೀರು ಹಾಯಿಸಲಾಗುತ್ತಿದ್ದು, ಹೊಸ ಪೈಪ್‍ಲೈನ್ ಅವಶ್ಯಕತೆ ಇದೆ ಎಂದು ಗ್ರಾಪಂ ಅಧಿಕಾರಿ ಹೇಳಿದರು. ಹೆಂಗವಳ್ಳಿ ಗ್ರಾಪಂ.ನಲ್ಲಿ 150 ಮನೆಗಳಿಗೆ ಪೈಪ್‍ಲೈನ್ ಅಳವಡಿಸದೇ ಇರುವುದರಿಂದ ನೀರು ಕೊಡಲು ಆಗುತ್ತಿಲ್ಲ. ಬೋರ್‍ವೆಲ್ ತೆಗೆದರೆ ಯಾವುದೇ ಪ್ರಯೋಜನ ಇಲ್ಲ ಎಂದು ಗ್ರಾಪಂ ಅಧಿಕಾರಿ ಹೇಳಿದರು.

ಅಮಾಸೆಬೈಲ್ ಜಡ್ಡಿನಗದ್ದೆ ಎಂಬಲ್ಲಿ ನೀರಿನ ಮೂಲವೇ ಇಲ್ಲ ಎಂದು ಬೆಳ್ವೆ ಗ್ರಾಮದ ಗುಡ್ಡೆಮೇಲೆ ಇರುವ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಹುದು ಎಂದು, ಹಂದಟ್ಟು ಭಾಗದಲ್ಲಿ ವಾರಾಹಿಯವರು ಅರ್ಧಂಬರ್ಧ ಕೆಲಸ ಮಾಡಿದ್ದಾರೆ, ಕೆಂಪು ನೀರಿನ ಸಮಸ್ಯೆ ಇರುವುದರಿಂದ ಫಿಲ್ಟರ್ ಅಳವಡಿಸಬೇಕು ಎಂದು ಸಂಬಂಧಪಟ್ಟ ಗ್ರಾಪಂ ಅಧಿಕಾರಿಗಳು ಮಾಹಿತಿ ನೀಡಿದರು.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಪಂ.ಗಳಲ್ಲಿ ಸಮಸ್ಯೆ ಬಗೆಹರಿಸಲು ತುರ್ತು ಕ್ರಮಕೈಗೊಳ್ಳಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪಗಳ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮೆಸ್ಕಾಂ, ಅರಣ್ಯ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಂದಾಪುರ ತಹಶೀಲ್ದಾರ್ ಪ್ರದೀಪ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ, ಹೆಬ್ರಿ ತಹಶೀಲ್ದಾರ್ ಪ್ರಸಾದ್, ಕುಂದಾಪುರ ತಾಪಂ ಇಒ ಡಾ.ರವಿಕುಮಾರ್ ಹುಕ್ಕೇರಿ, ಬ್ರಹ್ಮಾವರ ತಾಪಂ ಇಒ ಇಬ್ರಾಹಿಂಪುರ, ಉಡುಪಿ ತಾಪಂ ಇಒ ವಿಜಯ್, ನೀರು ಸರಬರಾಜು ಇಲಾಖೆ ಇಂಜಿನಿಯರ್ ಉದಯ ಶೆಟ್ಟಿ, ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here