ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಿ.ಇ.ಟಿ ಪ್ರವೇಶ ಪರೀಕ್ಷೆಯ ಸಂದರ್ಭದಲ್ಲಿ ಯಜ್ಞೋಪವಿತವನ್ನು ಕತ್ತರಿಸಿದ್ದು ಹಾಗೂ ಜನಿವಾರ ಧರಿಸಿದವರಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡದಿರುವ ಘಟನೆಯನ್ನು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ತೀವ್ರವಾಗಿ ಖಂಡಿಸಿದೆ.
ಗುರುವಾರ ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ವಾದಿರಾಜ ಹೆಬ್ಬಾರ್ ಅವರು ಏ.16ರಂದು ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ನಡೆದ ಇಂಜಿನಿಯರಿಂಗ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ದೈಹಿಕ ತಪಾಸಣೆ ಮಾಡುವ ಸೋಗಿನಲ್ಲಿ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಭಾವನೆ ಹೊಂದಿದ್ದ ಯಜ್ಞೋಪವಿತವನ್ನು ಧರಿಸಿದ್ದರು. ಈ ಪರೀಕ್ಷಾ ಕೇಂದ್ರದ ಅಧಿಕಾರಿಗಳು ದುರುದ್ದೇಶ ಪೂರ್ವಕವಾಗಿ ಹಾಗೂ ವಿದ್ಯಾರ್ಥಿಗಳ ಇಚ್ಚೆಗೆ ವಿರುದ್ಧವಾಗಿ ಕತ್ತರಿಸಿ, ತುಂಡು ಮಾಡಿ ಕಸದ ಬುಟ್ಟಿಗೆ ಹಾಕಿರುತ್ತಾರೆ. ಹಾಗೂ ಅದನ್ನು ಧರಿಸಿಕೊಂಡು ಬಂದರೆ ನಿಮ್ಮನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಕೊಡುವುದಿಲ್ಲವೆಂದು ತಿಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಧಾರ್ಮಿಕವಾಗಿ ಹಾಗೂ ಮಾನಸಿಕವಾಗಿ ಘಾಸಿಗೊಂಡಿದ್ದಾರೆ. ಯಾವುದೇ ಪ್ರವೇಶ ಪರೀಕ್ಷೆ ನಿಯಮದಲ್ಲಿ ಯಜ್ಞೋಪವಿತವನ್ನು ಧರಿಸಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರ್ಬಂಧ ಇಲ್ಲದಿದ್ದರೂ ವೈಯಕ್ತಿಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ಕಾನೂನು ಬಾಹಿರವಾಗಿ ಸಾರ್ವಜನಿಕವಾಗಿ ಧಕ್ಕೆ ಉಂಟು ಮಾಡಿದ್ದು ಈ ಕೃತ್ಯದಿಂದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹಾಗೂ ಯಜ್ಞೋಪವಿತ ಧಾರಣೆಯ ನಂಬಿಕೆ ಉಳ್ಳಂತಹ ಸಾರ್ವಜನಿಕರ ಭಾವನೆಗಳಿಗೆ ತೀವ್ರವಾದ ಘಾಸಿ ಉಂಟು ಮಾಡಿದ್ದಾರೆ. ಇದು ಮುಂದೆ ಪುನರಾವರ್ತನೆ ಆಗಬಾರದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಸಿ.ಇಟಿ ಪ್ರವೇಶ ಪರೀಕ್ಷೆಯ ಅವಕಾಶ ವಂಚಿತವಾದ ವಿದ್ಯಾರ್ಥಿಗೆ ಮರಳಿ ಅವಕಾಶ ನೀಡಬೇಕು ಎಂದು ತಿಳಿಸಿದರು.