ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ರಾಜ್ಯ ಸರಕಾರದ ಕುಂದಾಪುರ ತಾಲೂಕಿಗೆ ಗೃಹಲಕ್ಷ್ಮೀ ಯೋಜನೆಯಡಿ 15.61 ಕೋಟಿ, ಗೃಹಜ್ಯೋತಿ ಯೋಜನೆಯಡಿ 4.08 ಕೋಟಿ ರೂ., ಅನ್ನಭಾಗ್ಯ ಯೋಜನೆಯಡಿ 4.19 ಕೋಟಿ ಮತ್ತು ಶಕ್ತಿ ಯೋಜನೆಯಡಿ 2.51 ಕೋಟಿ ರೂ. ಸೇರಿದಂತೆ ಮಾರ್ಚ್ ತಿಂಗಳಿನಲ್ಲಿ ಕುಂದಾಪುರ ತಾಲೂಕಿಗೆ ಪಂಚಗ್ಯಾರಂಟಿ ಯೋಜನೆಯಡಿ 26.60 ಕೋಟಿ ರೂ. ಅನುದಾನ ಬಂದಿದೆ. ಸರಕಾರ ಅಧಿಕಾರಕ್ಕೆ ಬಂದ 23 ತಿಂಗಳಿನಲ್ಲಿ ತಾಲೂಕಿಗೆ 334 ಕೋಟಿ ರೂ. ಪಂಚ ಗ್ಯಾರಂಟಿ ಯೋಜನೆಯಡಿ ಫಲಾನುಭವಿಗಳಿಗೆ ದೊರೆತಿದೆ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ ಎಂದು ವಿರೋಧ ಪಕ್ಷಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಕೋಟ್ಯಾಂತರ ರೂ. ಅನುದಾನ ತಾಲೂಕಿಗೆ ಬಂದಿದ್ದು, ರಸ್ತೆ, ಸೇತುವೆಗಳು ನಿರ್ಮಾಣಗೊಳ್ಳುತ್ತಿದೆ. ಬಡಾಕೆರೆ ಹೋಗುವ ಬಸ್ಸು ನ್ಯಾಯಾಲಯದಿಂದ ತಡೆಯಾಜ್ಞೆಯಿಂದ ನಿಂತಿದೆ. ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೆಎಸ್‍ಆರ್‍ಟಿಸಿ ಸೂಚನೆ ನೀಡಲಾಗಿದೆ. ಇದೇ ಆಧಾರದಲ್ಲಿ ಖಾಸಗಿ ಬಸ್ಸಿನವರು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಸಂಚರಿಸುತ್ತಿರುವ ಎಲ್ಲಾ ಬಸ್‍ನ್ನು ನಿಲ್ಲಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ವಿಚಾರವನ್ನು ಜಿಲ್ಲಾಡಳಿತ ಮತ್ತು ಸರಕಾರದ ಗಮಕ್ಕೆ ತರಲಾಗಿದೆ. ಮೈಸೂರು ಕೊಲ್ಲೂರು ಬಸ್ ಪುನರಾರಂಭಕ್ಕೆ ಬರೆದುಕೊಂಡರೂ ಸಿಬಂದಿ ಕೊರತೆಯಿಂದ ಆರಂಭವಾಗಿಲ್ಲ ಎಂದು ಹೇಳಿದರು.
ಕೊಲ್ಲೂರು ದೇವಳದ ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್‍ಗೆ ಈಗ ಅವಕಾಶ ನೀಡಲಾಗಿದೆ. ಆದರೆ ಬಸ್‍ಗೆ 20 ರೂ.ಗಳಂತೆ ಶುಲ್ಕ ವಸೂಲಿ ಮಾಡಲಾಗುತ್ತಿದ್ದು ಕಂಡಕ್ಟರ್ ಸ್ವಂತ ಹಣದಿಂದ ಪಾವತಿಸುತ್ತಿದ್ದಾರೆ. ಇದನ್ನು ಉಚಿತವಾಗಿಸಬೇಕು ಎಂದು ಕೆಎಸ್‍ಆರ್‍ಟಿಸಿ ಅಧಿಕಾರಿ ಮನವಿ ಮಾಡಿದರು. ಗೃಹಲಕ್ಷ್ಮೀ ಅನುದಾನ ಬಾಕಿ ಇರುವ ಕೊರಗ ಕುಟುಂಬದವರಿಗೆ ಅಂಗನವಾಡಿ ಕಾರ್ಯಕರ್ತರ ಮೂಲಕ ದಾಖಲೆ ಕೊಡಿಸಿ ಹಣ ದೊರೆಯುವಂತೆ ಮಾಡಬೇಕು ಎಂದು ಗಣೇಶ್ ಕೊರಗ ಹೇಳಿದರು. ಗ್ಯಾರಂಟಿ ಸಮಿತಿ ಸಭೆಯ ಫಲಶ್ರುತಿಯಾಗಿ ಕುಂಭಾಶಿಯ 3 ಕೊರಗ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ದೊರೆತಿದೆ. ಮೆಸ್ಕಾಂ ಪ್ರಯತ್ನ ಶ್ಲಾಘನೀಯ ಎಂದರು.
ಉಡುಪಿಯಿಂದ ಅಮಾಸೆಬೈಲು ಜಡ್ಡಿನಗದ್ದೆಗೆ ಹೋಗುವ ಬಸ್ಸು ಮತ್ತು ಉಡುಪಿಯಿಂದ ಹಾಲಾಡಿ, ಚೋರಾಡಿ, ಕಕ್ಕುಂಜೆ, ಮಂದರ್ತಿಗೆ ಹೋಗುವ ಬಸ್ಸು ನಿಲುಗಡೆಯಾಗಿದೆ. ಇಲ್ಲಿ ಸರಕಾರಿ ಬಸ್ ಒಂದು ಮಾತ್ರ ಇದ್ದು ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ವಸುಂಧರ ಹೆಗ್ಡೆ ಹೇಳಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಕುಮಾರ್ ಹುಕ್ಕೇರಿ, ಸದಸ್ಯರಾದ ಚಂದ್ರ ಕಾಂಚನ್, ವಾಣಿ ಆರ್. ಶೆಟ್ಟಿ, ಆಶಾ ಕರ್ವಾಲೊ, ಕೋಣಿ ನಾರಾಯಣ ಆಚಾರ್, ಅರುಣ್ ಕುಮಾರ್, ಸವಿತಾ ಪೂಜಾರಿ, ಮಂಜು ಕೊಠಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಉಮೇಶ್ ಕೋಟ್ಯಾನ್, ಮೆಸ್ಕಾಂ ಎಇಇ ವಿಜಯ ಕುಮಾರ್ ಶೆಟ್ಟಿ, ಗುರುಪ್ರಸಾದ್ ಭಟ್, ಆಹಾರ ಶಾಖೆ ಉಪತಹಶೀಲ್ದಾರ್ ಸುರೇಶ್ ಮೊದಲಾದವರು ಇದ್ದರು.