ಕುಂದಾಪುರ ಮಿರರ್ ಸುದ್ದಿ…
ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು ಘಟಕ 2ರ ಉದ್ಘಾಟನೆ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಸಂತೋಷ್ ನಾಯಕ್ ವಿದ್ಯಾರ್ಥಿಗಳನ್ನು ಕುರಿತು ತಾನು ಬೆಳಗುವುದರೊಂದಿಗೆ ಸಮಾಜವನ್ನು ಬೆಳಗುವುದೇ ರಾಷ್ಟ್ರೀಯ ಸೇವಾ ಯೋಜನೆಯ ಆಶಯ, ಭಾರತದಂತಹ ಸಾಂಪ್ರಾದಾಯಿಕ ದೇಶದಲ್ಲಿ ಸಮಾಜ ಸುಧಾರಣಾ ಚಳುವಳಿಯ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸವಿದೆ. ಅಪೂರ್ವವಾದ ಸೇವಾ ಪರಂಪರೆ ರಾಷ್ಟ್ರೀಯ ಸೇವಾ ಯೋಜನೆಯಂತಹ ಸ್ವಯಂ ಸೇವಾ ಕಾರ್ಯದ ಉಗಮಕ್ಕೆ ಕಾರಣವಾಗಿದೆ. ಸಹಬಾಳ್ವೆ, ಸಹಜೀವನ, ಸ್ವಾವಲಂಬನೆಯ ಪಾಠ, ಪರಿಸರ ಕಾಳಜಿ, ಸ್ವಚ್ಛತೆ, ತ್ಯಾಗ ಮನೋಭಾವನೆ, ಸಾಮರಸ್ಯ, ಶ್ರಮ ಸಂಸ್ಕೃತಿ ಇತ್ಯಾದಿ ಬದುಕಿನ ಮೌಲ್ಯಗಳನ್ನು ವಿದ್ಯಾರ್ಥಿಗಳು ಯುವ ವಯಸ್ಸಿನಲ್ಲಿಯೇ ರೂಪಿಸಿಕೊಂಡು ಸಶಕ್ತ ನಾಗರಿಕರಾಗಿ ದೇಶದ ಬೆಳವಣಿಗೆಗೆ ಮತ್ತು ಕೋವಿಡ್‍ನಂತಹ ತುರ್ತು ಸಂದರ್ಭದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ನಿತ್ಯಾನಂದ ವಿ ಗಾಂವಕರ ವಹಿಸಿದರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ನಾಗರಾಜ ವೈದ್ಯ, ಐಕ್ಯುಎಸಿ ಸಂಚಾಲಕ ರವಿಪ್ರಸಾದ್ ಕೆ.ಜಿ ,ಎನ್‍ಎಸ್‍ಎಸ್ ಯೋಜನಾಧಿಕಾರಿ ಡಾ. ಮುರುಳಿ ಎನ್ ಮತ್ತು ಅನಂತಕುಮಾರ್ ಸಿ.ಎಸ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ ನೀಲಾವರ, ಗ್ರಂಥಪಾಲಕ ಕೃಷ್ಣ ಸಾಸ್ತಾನರವರು ಭಾಗವಹಿಸಿದ್ದರು. ಹಾಗೂ ಎರಡು ಘಟಕಗಳ ನಾಯಕರುಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು.