ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ .ನಿ ಮಂಗಳೂರು ಇದರ 107ನೇ ನೂತನ ಶಿರೂರು ಶಾಖೆಯ ಉದ್ಘಾಟನಾ ಸಮಾರಂಭ ಪ್ರಭು ಕಾಂಪ್ಲೇಕ್ಸ್ ಶಿರೂರಿನಲ್ಲಿ ಉದ್ಘಾಟನೆಗೊಂಡಿತು. ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ನೂತನ ಶಿರೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ರಾಜೇಂದ್ರ ಕುಮಾರ್ ಅವರ ಅನುಭವ ಅಪಾರ. ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಕ್ರಾಂತಿಯ ಹರಿಕಾರರಾಗಿದ್ದಾರೆ. ಪಟ್ಟಣ ವ್ಯಾಪ್ತಿಯ ಜೊತೆಗೆ ಗ್ರಾಮೀಣ ಭಾಗದಲ್ಲಿ ಸಹಕಾರಿ ಕ್ಷೇತ್ರದ ಸಹಕಾರದಿಂದ ಸ್ವಾವಲಂಬನೆಯ ಬದುಕು ಕಾಣುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ನವೋದಯ ಸ್ವ-ಸಹಾಯ ಸಂಘಗಳು ಅನೇಕ ಕುಟುಂಬಗಳ ಬದುಕಿನ ಭರವಸೆಯಾಗಿದೆ. ಇನ್ನಷ್ಟು ಹೊಸ ಶಾಖೆಗಳು ಆರಂಭಗೊಳ್ಳಲಿ ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದ ಆರಂಭ ಆ ಊರಿನ ಅಭಿವೃದ್ದಿ ಸಂಕೇತವಾಗಿದೆ. ಗ್ರಾಮೀಣ ಭಾಗದ ಹಣಕಾಸು ಭಾಂದವ್ಯ ಹಾಗೂ ಭರವಸೆ ಆಲ್ಲಿನ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳದ್ದಾಗಿದೆ. ಸಾಲಮನ್ನಾ, ಬಡ್ಡಿಮನ್ನಾ ಮುಂತಾದ ಯೋಜನೆಗಳು ಜನರಿಗೆ ಸಹಕಾರಿ ಕ್ಷೇತ್ರದಿಂದ ತಲುಪಿದೆ. ನಲವತ್ತು ಸಾವಿರ ಗುಂಪು ರಚನೆ ಹಾಗೂ ಎಂಟು ಜಿಲ್ಲೆಗಳಿಗೆ ಸ್ವ-ಸಹಾಯ ಗುಂಪು ವಿಸ್ತರಣೆ ಜೊತೆಗೆ ಮಾರ್ಚ್ ಅಂತ್ಯದೊಳಗೆ 110 ಶಾಖೆ ಆರಂಭಿಸುವ ಗುರಿಯಿದೆ ಎಂದರು.
ಬೈ.ವ್ಯ.ಸೇ.ಸಹಕಾರಿ ಸಂಘದ ಅಧ್ಯಕ್ಷ ಟಿ.ನಾರಾಯಣ ಹೆಗ್ಡೆ ಗಣಕೀರಣ ಉದ್ಘಾಟಿಸಿದರು. ಶಿರೂರು ಗ್ರಾ.ಪಂ ಅಧ್ಯಕ್ಷೆ ಜಿ.ಯು ದಿಲ್‌ಶಾದ್ ಬೇಗಂ ಭದ್ರತಾ ಕೊಠಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ.,ನಿರ್ದೇಶಕ ಹರಿಶ್ಚಂದ್ರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ಬಾಲಚಂದ್ರ ಪ್ರಭು ಹಾಗೂ ಶಿರೂರು ಶಾಖಾ ವ್ಯವಸ್ಥಾಪಕ ರಾಜೇಶ ರವರನ್ನು ಸಮ್ಮಾನಿಸಲಾಯಿತುದ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಸ್ವಾಗತಿಸಿದರು. ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಮೊಳವಳ್ಳಿ ಮಹೇಶ್ ಹೆಗ್ಡೆ ವಂದಿಸಿದರು.