ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ವಡೇರಹೋಬಳಿ ಶಾಖೆಯು ವಡೇರಹೋಬಳಿ ವಿವೇಕ ಆಸ್ಪತ್ರೆ ಹತ್ತಿರದ ಪಿ.ವಿ.ಎಸ್ ಕಾಂಪ್ಲೆಕ್ಸ್‍ನ ನೆಲ ಅಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜ.4ರಂದು ನಡೆಯುತು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ ಮೊಳಹಳ್ಳಿ ಶಿವರಾವ್ ಅವರ ಭದ್ರ ಬುನಾದಿಯಿಂದ ಇವತ್ತು 107 ಶಾಖೆಗಳನ್ನು ಆರಂಭಿಸಲು ಸಾಧ್ಯವಾಯಿತು. ಜನರಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ 5 ವರ್ಷದಲ್ಲಿ 150 ಶಾಖೆಗಳನ್ನು, 2022ರ ಅಂತ್ಯದೊಳಗೆ 125 ಶಾಖೆಗಳನ್ನು ತೆರೆಯುವ ಗುರಿ ಇದೆ ಎಂದರು.
ಈಗಾಗಲೇ ದ.ಕ ಜಿಲ್ಲೆಯಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭಗೊಂಡಿದೆ. ಉಡುಪಿ ಜಿಲ್ಲೆಯಲ್ಲಿಯೂ ಕೂಡಾ ಈ ತಿಂಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ಸೇವೆ ಆರಂಭವಾಗಲಿದೆ. ಮಾರ್ಚ್ ಅಂತ್ಯದೊಳಗೆ ಉಪ್ಪುಂದ ಮತ್ತು ತಲ್ಲೂರಿನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಶಾಖೆಗಳು ಆರಂಭವಾಗಲಿದೆ ಎಂದರು.
ಸಾಲಸೌಲಭ್ಯದ ಸಮಸ್ಯೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಅವಿಭಜಿತ ದ.ಕ ಜಿಲ್ಲೆಯಲ್ಲಿ ಇಲ್ಲ. ಇದು ಇಲ್ಲಿನ ರೈತಾಪಿಗಳ ಆತ್ಮಸ್ಥೈರ್ಯದ ಪ್ರತೀಕವಾಗಿದೆ ಎಂದು ಹೇಳಿದ ಅವರು, ನವೋದಯ ಸದಸ್ಯರಲ್ಲಿ ಸ್ವ ಉದ್ಯೋಗಕ್ಕೆ ಉತ್ತೇಜಿಸುವ ಸಲುವಾಗಿ ಒಂದೊಂದು ಗುಂಪಿಗೆ ಕಡಿಮೆ ಬಡ್ಡಿದರದಲ್ಲಿ 20 ಲಕ್ಷ ಸಾಲ ನೀಡಲಾಗುವುದು. ಒಟ್ಟು 40 ಸಾವಿರ ನವೋದಯ ಗುಂಪುಗಳಿದ್ದು, 8 ಲಕ್ಷ ಸಮವಸ್ತ್ರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಈ ಬಾರಿ ಪುರುಷ ಸದಸ್ಯರಿಗೂ ಪಂಚೆ, ಬಿಳಿ ಅಂಗಿಯ ಸಮವಸ್ತ್ರ ಒದಗಿಸಲು ನಿರ್ಧರಿಸಲಾಗಿದೆ ಎಂದರು.
ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಶುಭ ಹಾರೈಸಿದರು. ಕಟ್ಟಡದ ಮಾಲಿಕರಾದ ಎನ್.ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ, ಎಸ್‍ಸಿಡಿಸಿಸಿ ಬ್ಯಾಂಕ್ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ ಉಪಸ್ಥಿತರಿದ್ದರು.
ವಡೇರಹೋಬಳಿ ಶಾಖಾ ವ್ಯವಸ್ಥಾಪಕರಾದ ಚಂಪಾವತಿ ಜಿ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ವಾಹನ ಸಾಲ, ಗೃಹ ಸಾಲಪತ್ರಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು. 10 ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಲಾಯಿತು.23 ನವೋದಯ ಸಂಘಗಳಿಗೆ ಸಾಲ ವಿತರಿಸಲಾಯಿತು. ಚೈತನ್ಯ ವಿಮಾ ಯೋಜನೆ ಫಲಾನುಭವಿಗಳಿಗೆ ಪರಿಹಾರದ ಮೊತ್ತ ವಿತರಿಸಲಾಯಿತು.
ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ ಸ್ವಾಗತಿಸಿ, ಇನ್ನೋರ್ವ ನಿರ್ದೇಶಕ ಎಸ್.ರಾಜು ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.