ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ರಾಜ್ಯ ಹೋಟೆಲ್ ಮಾಲಕರ ಸಂಘದ ಮಾಜಿ ಅಧ್ಯಕ್ಷ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕೋಟೇಶ್ವರ ಮಾಗಣೆಯ ಹಿರಿಯ ನೇತಾರ ದಿ. ನೇರಂಬಳ್ಳಿ ನಾರಾಯಣ ರಾಯರ ಪ್ರಥಮ ಪುಣ್ಯಸ್ಮರಣೆಯ ನುಡಿನಮನ ಕಾರ್ಯಕ್ರಮ ಕೋಟೇಶ್ವರದ ಶ್ರೀ ವಾದಿರಾಜ ಕಲ್ಯಾಣಮಂಟಪದಲ್ಲಿ ನಡೆಯಿತು.
ಹಿರಿಯ ಮುತ್ಸದ್ದಿ ಎ ಜಿ ಕೊಡ್ಗಿ ದೀಪ ಬೆಳಗಿ ನಾರಾಯಣ ರಾಯರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ನುಡಿನಮನಗೈದರು.
ಮಯೂರ ಸಮೂಹ ಉದ್ಯಮ ಸಂಸ್ಥೆಗಳ ಮುಖ್ಯಸ್ಥ ಗೋಪಾಡಿ ಶ್ರೀನಿವಾಸ ರಾವ್ ನುಡಿನಮನ ಸಲ್ಲಿಸಿ, ನೇರಂಬಳ್ಳಿ ನಾರಾಯಣ ರಾಯರು ಅಹಂಕಾರ ರಹಿತರಾದ ಸ್ನೇಹಜೀವಿ. ಯಾರಲ್ಲೂ ತಾರತಮ್ಯ ಎಣಿಸದ ಅವರು ಒಂದು ದಂತಕತೆಯಾದವರು ಎಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ಹಿರಿಯ ನ್ಯಾಯವಾದಿ, ಸಾಹಿತಿ ಎ ಎಸ್ ಎನ್ ಹೆಬ್ಬಾರ್ ಮಾತನಾಡಿ, ರಾಯರು ಹೋಟೆಲ್ ಉದ್ಯಮವನ್ನು ವ್ಯವಹಾರ ಎಂದು ಪರಿಗಣಿಸದೆ, ಆತಿಥ್ಯದ ರೀತಿ ನಡೆಸಿದವರು. ಸಾವಿರಾರು ಮಂದಿಯ ಅನ್ನದಾತರಾದ ಅವರು ನಿತ್ಯಸ್ಮರಣೀಯರು ಎಂದು ವಿವರಿಸಿ, ತಮ್ಮ – ಅವರ ಬಾಂಧವ್ಯವನ್ನು ಸ್ಮರಿಸಿದರು.
ಸಂಘಪರಿವಾರದ ಹಿರಿಯ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್, ಲೆಕ್ಕ ಪರಿಶೋಧಕ ಗೌತಮ್, ಶ್ರೀನಿವಾಸ ಹೆಬ್ಬಾರ್ ಮೊದಲಾದವರು ನಾರಾಯಣ ರಾಯರಿಗೆ ನುಡಿನಮನ ಸಲ್ಲಿಸಿದರು.
ಪ್ರಕಾಶ್ ಬಿಳಿಯ ಸಂದೇಶ ವಾಚಿಸಿದರು. ನಾರಾಯಣ ರಾಯರ ಹಿರಿಯ ಪುತ್ರ ಮತ್ತು ಸೊಸೆ ಎನ್. ರಾಘವೇಂದ್ರ ರಾವ್ – ರತ್ನಮಾಲಾ ದಂಪತಿ, ಕಿರಿಯ ಪುತ್ರ ಎನ್. ಶ್ರೀನಿವಾಸ ರಾವ್ – ಗೀತಾ ದಂಪತಿ, ಪುತ್ರಿಯರಾದ ಗೀತಾ, ಶಾಂತಾ, ರತ್ನ, ಆಶಾ, ಕುಟುಂಬದವರು, ವಿವಿಧ ಸಂಘ – ಸಂಸ್ಥೆಗಳವರು, ಉದ್ದಿಮೆದಾರರು, ಹಿರಿಯ ಪತ್ರಿಕೋದ್ಯಮಿ ಯು ಎಸ್ ಶೆಣೈ, ಸಂಘಪರಿವಾರದ ಸುಬ್ರಹ್ಮಣ್ಯ ಹೊಳ್ಳ, ಹಿತೈಷಿಗಳು ಉಪಸ್ಥಿತರಿದ್ದರು.
ಕೆ ಜಿ ವೈದ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
“ಎಲ್ಲ ಶುಭ ಸಮಾರಂಭಗಳಲ್ಲೂ ಮಾವು ಮತ್ತು ಹಲಸಿನ ಕುಡಿಗಳನ್ನು ಕಟ್ಟುವುದು ಸಂಪ್ರದಾಯ. ಇದು ಶುಭ ಸೂಚಕ. ಹಾಗೆಯೇ ನೇರಂಬಳ್ಳಿ – ಕೋಟೇಶ್ವರ ಪರಿಸರದ ಯಾವುದೇ ಕುಟುಂಬದ ವಿಶೇಷ ಸಮಾರಂಭಗಳಲ್ಲಿ ನೇರಂಬಳ್ಳಿ ನಾರಾಯಣ ರಾವ್ ಮತ್ತವರ ಸಹೋದರ ಎನ್ ಆರ್ ನಾಗಪ್ಪಯ್ಯ ಜೋಡಿಯ ಸಹಾಯ, ಹಾಜರಾತಿ ಇದ್ದೇ ಇರುತ್ತಿತ್ತು. ಈ ಸಹೋದರ ಜೋಡಿ ಅಷ್ಟೊಂದು ಉದಾರಿಗಳು ಮತ್ತು ಜನಾನುರಾಗಿಗಳಾಗಿದ್ದರು. ಈ ಸಹೋದರ ಜೋಡಿಯನ್ನು “ಮಾವಿನ ಕುಡಿ, ಹಲಸಿನ ಕುಡಿ ಜೋಡಿ” ಎಂದೇ ಆತ್ಮೀಯರು ಗುರುತಿಸುತ್ತಿದ್ದರು.” -ಗೋಪಾಡಿ ಶ್ರೀನಿವಾಸ ರಾವ್