ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕೊಪ್ಪರಿಗೆಬೆಟ್ಟುವಿನಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ `ಶ್ರೀ ವರಲಕ್ಷ್ಮೀ ನಿಲಯ’ ನೂತನ ಗೃಹದ ಹಸ್ತಾಂತರ ಸಮಾರಂಭ ಶುಕ್ರವಾರ ಜರುಗಿತು.
ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ನೂತನ ಗೃಹವನ್ನು ಉದ್ಘಾಟಿಸಿ ಆಶೀರ್ವದಿಸಿ, ಮನುಷ್ಯನಲ್ಲಿ ಉತ್ತಮ ಗುಣದೊಂದಿಗೆ ಸಂಸ್ಕಾರವೂ ಅತೀ ಅಗತ್ಯವಾಗಿದೆ. ಧರ್ಮ, ಸಂಸ್ಕøತಿ, ಸಂಸ್ಕಾರದಿಂದಾಗಿ ಮನುಷ್ಯನ ಉನ್ನತಿ ಹಾಗೂ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ನಾರಿ ಜಾಗೃತಿಯ ಅಗತ್ಯವಿದೆ. ಹೆಣ್ಣು ಮಕ್ಕಳಿಗೆ ಇದರ ಅರಿವು ಮೂಡಿದರೆ ಕುಟುಂಬ ಹಾಗೂ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಸಾಧ್ಯವಿದೆ ಎಂದರು.
ಬಾಬು ಪೂಜಾರಿ ಹಾಗೂ ಮಂಜಮ್ಮ ದಂಪತಿಗಳು ಅವರು ಮನೆಯ ಬಿಗದ ಕೈಯನ್ನು ಮಾಲಿಕರಾದ ಸುಶೀಲಾ ಪೂಜಾರ್ತಿ ಅವರಿಗೆ ಹಸ್ತಾಂತರಿಸಿದರು.
ಬಳಿಕ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಟ್ರಸ್ಟೀ ಮೂಲಕ ನಿರ್ಮಿಸಲಾಗಿರುವ ಆರನೇ ಮನೆ ಇದಾಗಿದೆ. ಟ್ರಸ್ಟ್ ಮೂಲಕ ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ. ಟ್ರಸ್ಟ್ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಅಗತ್ಯವುಳ್ಳವರಿಗೆ ಆರ್ಥಿಕ ನೆರವು, ವಿದ್ಯಾರ್ಥಿ ವೇತನ, ಚಿಕಿತ್ಸೆಗೆ ನೆರವು ಸೇರಿದೆ ಎಂದರು.
ಗೋವಿಂದ ಬಾಬು ಪೂಜಾರಿ – ಮಾಲತಿ ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಉಪ್ಪುಂದ ಶನಿಮಂದಿರದ ವಿಜಯ ಪೂಜಾರಿ, ಕೋಟ ಶನೀಶ್ವರ ದೇವಸ್ಥಾನದ ಭಾಸ್ಕರ ಸ್ವಾಮಿ, ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ, ಪ್ರಿಯದರ್ಶಿನಿ ಬೆಸ್ಕೂರು, ಪ್ರದೀಪ್ ಪೂಜಾರಿ ಮುಳ್ಳಿಕಟ್ಟೆ, ಟ್ರಸ್ಟ್‍ನ ಸದಸ್ಯರಾದ ಸುಧಾಕರ ಆರ್. ಪೂಜಾರಿ, ಮೊದಲಾದವರು ಉಪಸ್ಥಿತರಿದ್ದರು.