ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ನಿರಾಕರಿಸಿದರೆ ಕಠಿಣ ಕ್ರಮ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

0
568

ಕುಂದಾಪುರ ಮಿರರ್ ಸುದ್ದಿ…
ಉಡುಪಿ:
ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೊಂದಾಯಿಸಿರುವ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ಮೂಲಕ ಕಳುಹಿಸುವ ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ಬೆಡ್ ಗಳನ್ನು ನೀಡಲು ನಿರಾಕರಿಸಿದಲ್ಲಿ ಅಂತಹ ಅಸ್ಪತ್ರೆಗಳು ವಿರುದ್ದ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳು ಸರ್ಕಾರದ ನಿರ್ದೇಶನದಂತೆ ತಮ್ಮಲ್ಲಿನ ಎಲ್ಲಾ ಮಾದರಿಯ ಬೆಡ್ ಗಳಲ್ಲಿ ನಿಗಧಿತ ಸಂಖ್ಯೆ ಬೆಡ್‌ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಬೇಕು, ಜಿಲ್ಲಾಡಳಿತ ಕಳುಹಿಸುವ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ದ ಕೆಪಿಎಂಇ ಮತ್ತು ವಿಪತ್ತು ನಿರ್ವಹಣಾ ಕಾಯಿದೆಯನ್ವಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ಐ.ಎಲ್.ಐ ಮತ್ತು ಸಾರಿ ರೋಗಿಗಳ ವಿವರಗಳನ್ನು ತಪ್ಪದೇ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು, ಇದಕ್ಕಾಗಿ ರೂಪಿಸಿರುವ ಪೋರ್ಟಲ್ ನಲ್ಲಿ ಪ್ರತಿ ದಿನದ ಮಾಹಿತಿಯನ್ನು ದಾಖಲಿಸಬೇಕು, ಮಾಹಿತಿ ದಾಖಲಿಸದ ಆಸ್ಪತ್ರೆಗಳ ವಿರುದ್ದ ಸಹ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು, ಆಸ್ಪತ್ರೆಗಳಲ್ಲಿನ ಎಲ್ಲಾ ವೈದ್ಯಕೀಯ ಉಪಕರಣಗಳು ಸುಸಜ್ಜಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಕುರಿತಂತೆ ಪರಿಶೀಲಿಸಿ, ಅಗತ್ಯ ದುರಸ್ತಿ ಕಾರ್ಯಗಳನ್ನು ತಕ್ಷಣದಲ್ಲೇ ಕೈಗೊಂಡು ಬಳಕೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು, ಆಸ್ಪತ್ರೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಬಗೆಹರಿಸಕೊಳ್ಳಬೇಕು ಎಂದರು.

Click Here

ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸೆಗೆ ತಗಲುವ ವೆಚ್ಚದ ಕುರಿತ ದರಪಟ್ಟಿಯನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಬೇಕು, ರೋಗಿಯನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಅಸ್ಪತ್ರೆಗೆ ವರ್ಗಾಯಿಸುವಾಗ ಅನಗತ್ಯ ವಿಳಂಬ ಮಾಡದೇ, ರೋಗಿಯ ಚಿಕಿತ್ಸೆಗೆ ಸಂಬಂದಿಸಿದ ಎಲ್ಲಾ ದಾಖಲೆಗಳನ್ನು ಸಕಾಲದಲ್ಲಿ ನೀಡಬೇಕು,ರೋಗಿಯನ್ನು ಆಸ್ಪತ್ರೆಗೆ ಸೆರ್ಪಡೆ ಮಾಡಿಕೊಳ್ಳುವ ಮುನ್ನ ಎ.ಬಿ.ಆರ್.ಕೆ ಯೋಜನೆಯ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದರು.

ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ನೇಮಕ ಮಾಡಿರುವ ನೋಡಲ್ ಆಧಿಕಾರಿಗಳು, ಆಸ್ಪತ್ರೆಯಲ್ಲಿನ ಸೌಲಭ್ಯಗಳು ಮತ್ತು ಲಭ್ಯವಿರುವ ಬೆಡ್ ಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಕೆಪಿಎಂಇ ನೋಡೆಲ್ ಆಧಿಕಾರಿ ಡಾ.ರಾಮರಾವ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳು ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here