ಕುಂದಾಪುರ ಮಿರರ್ ಸುದ್ದಿ…
ಕುಂದಾಪು: ತಾಲೂಕಿನ ತುತ್ತ ತುದಿಯ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆ ಹತ್ತಿರದ ಗಾಳಿಗುಡ್ಡ ಪ್ರಚಾರದಿಂದ ಬಹುದೂರವಿರುವ ಅತ್ಯಂತ ರಮ್ಯ ಮನೋಹರವಾದ ತಾಣ. ಹಸಿರು ಸೆರಗೊದ್ದು ಮಲಗಿದಂತೆ ಕಾಣುವ ಪಶ್ಚಿಮಘಟ್ಟದ ತಪ್ಪಲು ಪ್ರದೇಶ ಇಂತಹ ಅಸಂಖ್ಯ ದೈವಿ ಕ್ಷೇತ್ರಗಳು, ಚಾರಣಿಗರಿಗೆ ಹೇಳಿ ಮಾಡಿಸಿರುವಂಥಹ ಸ್ಥಳಗಳನ್ನು ಒಳಗೊಂಡಿದೆ. ಜಡ್ಡಿನಗದ್ದೆ ಶಾಲೆಯಿಂದ ಸುಮಾರು 1.5 ಕಿ,ಮೀ ಎತ್ತರ ಬೆಟ್ಟವೇ ಗಾಳಿಗುಡ್ಡ. ಈ ಗುಡ್ಡದಲ್ಲಿ ಮಹಾಗಣಪತಿಯ ನೈಸರ್ಗದತ್ತ ಆಲಯವಿದೆ. ಶತಶತಮಾನಗಳ ಪೂರ್ವದ ಈ ದೈವೀ ಸಾನಿಧ್ಯ ತನ್ನದೇಯಾದ ವೈಶಿಷ್ಠ್ಯತೆ ಹಾಗೂ ಪ್ರಾದೇಶಿಕವಾದ ನಂಬಿಕೆಯನ್ನು ಹೊಂದಿದೆ.
ಜಡ್ಡಿನಗದ್ದೆ, ಅಮಾಸೆಬೈಲು ತೀರಾ ಗ್ರಾಮೀಣ ಪ್ರದೇಶಗಳು. ದಟ್ಟ ಕಾನನದಂಚಿನ, ಪ್ರಕೃತಿಯ ಅಗರ್ಭ ಸಿರಿತನದ ಸುಂದರ ಗ್ರಾಮಗಳು. ಹಚ್ಚ ಹಸಿರ ಕಾನನ, ಸದಾ ತಂಪಾಗಿರುವ ಪರಿಸರ, ಕೃಷಿ ಆಧಾರಿತ ಜನಜೀವನ ಇಲ್ಲಿಯ ವಿಶೇಷ. ಎತ್ತ ಕಣ್ಣು ಹಾಯಿಸಿದರೂ ಕಾಡು ಕಾಡು ಕಾಡು. ಉದ್ದಕ್ಕೂ ಗೋಡೆಯಂತಿರುವ ಬರೆ, ಇನ್ನೊಂದೆಡೆ ಕಣ್ಣಾಯಿಸಿದರೆ ಎತ್ತರಕ್ಕೆ ಬೆಳೆದು ನಿಂತ ಬೆಟ್ಟ. ಹಸಿರನ್ನು ಮೈವೆತ್ತಂತೆ ಭಾಸವಾಗುವ ಈ ಬೆಟ್ಟವನ್ನು ಸ್ಥಳೀಯರು ಗಾಳಿಗುಡ್ಡ ಎಂದು ಕರೆಯುತ್ತಾರೆ. ಅದಕ್ಕೂ ಒಂದು ಹಿನ್ನೆಲೆ, ಒಂದಿಷ್ಟು ಐತಿಹ್ಯಗಳು ಇವೆ. ಅಕ್ಟೋಬರ್ ತಿಂಗಳಿಂದ ಹಿಡಿದು ಡಿಸೆಂಬರ್ 25 ರ ತನಕ ಅಮಾಸೆಬೈಲು ಹಾಗೂ ಜಡ್ಡಿನಗದ್ದೆ ಸುತ್ತ ಮುತ್ತ ಭಾರಿ ಗಾಳಿ ಬೀಸುತ್ತದೆ. ಈ ಮೂರು ತಿಂಗಳಲ್ಲಿ ಗಾಳಿಯ ರಭಸ ಮತ್ತು ತೀವ್ರತೆ ಜಾಸ್ತಿ ಇರುತ್ತದೆ. ಇಲ್ಲಿನ ಗಣಪತಿಯನ್ನು ಆರಾಧಿಸುವುದರಿಂದ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಇದು ತಲೆತಲೆಮಾರುಗಳಿಂದ ಬಂದ ಪ್ರತೀತಿ. ಹಾಗಾಗಿ ಪ್ರತೀ ವರ್ಷ ಡಿ. 25 ರಂದು ಮಹಾಗಣಪತಿ ಸನ್ನಿಧಿಯಲ್ಲಿ ಸಮಾರಾಧನೆ ಎನ್ನುವ ವಿಶಿಷ್ಠ ಧಾರ್ಮಿಕ ಕಾರ್ಯಕ್ರಮವನ್ನು ಇಲ್ಲಿ ನಡೆಸಲಾಗುತ್ತದೆ. ಅಂದು ಗಾಳಿಗುಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಗಾಳಿಗುಡ್ಡದ ಹಬ್ಬದ ಬಳಿಕ ಇಲ್ಲಿ ಗಾಳಿಯ ಒತ್ತಡ ಕಡಿಮೆಯಾಗುತ್ತದೆ ಎನ್ನುವ ಬಲವಾದ ನಂಬಿಕೆಯೂ ಇದೆ.
ಗಾಳಿಗುಡ್ಡ ಏರುವುದೇ ಒಂದು ಆಹ್ಲಾದನುಭೂತಿ. ಕೆಳಗಡೆಯಿಂದ ನೋಡಿದರೆ ನಿನ್ನ ನಾ ಏರಬಲ್ಲೆನಾ ಎನ್ನುವ ಪ್ರಶ್ನೆ ಮೂಡುತ್ತದೆ. ಏಕೆಂದರೆ ಬೆಟ್ಟದ ಆಕೃತಿ ಕೆಳಗಿನಿಂದ ನೋಡಿದಾಗ ಭಯ ಬೀಳಿಸುತ್ತದೆ. ಕಾಲು ಹಾದಿಯಲ್ಲಿಯೇ ಏರುತ್ತಾ ಹೋಗಬೇಕು. ದುರ್ಗಮವೂ, ಕಡಿದಾದ ಹಾದಿಯದು. ಅಲ್ಲಲ್ಲಿ ಜಾರುವ ಕಲ್ಲುಗಳು, ಮುಳ್ಳಿನ ಪೊದೆಗಳು, ಸಣ್ಣಪುಟ್ಟ ಕಾಡು ಪ್ರಾಣಿಗಳು ಪ್ರತ್ಯಕ್ಷವಾಗುತ್ತವೆ. ಮೇಲೆ ಏರುತ್ತಾ ಹೋದಂತೆ ಕೆಳಗಿನ ಪ್ರದೇಶಗಳು ರಮ್ಯಾತಿರಮ್ಯವಾಗಿ ವಿಹಂಗಮಯವಾಗಿ ಕಾಣ ಸಿಗುತ್ತದೆ. ಗದ್ದೆಗಳು ಪುಟ್ಟ ಪುಟ್ಟ ಬಟ್ಟಲುಗಳಂತೆ ಕಂಡು ಬರುತ್ತದೆ. ಬರೆಯ ನೋಟವೂ ಅದ್ಬುತ. ಕೆಳಗಿನ ಬೃಹದೇತ್ತರ ಮರಗಳು ಪುಟ್ಟ ಪುಟ್ಟ ಸಸಿಗಳಂತೆ ಕಂಡು ಬರುತ್ತವೆ. ಹೀಗೆ ಮೇಲೆ ಏರುತ್ತ ಹೋದಂತೆ ಶಿಲೆಗಲ್ಲಿನ ಪಾರೆಗಳು, ಅಲ್ಲಿ ಇರುವ ಪ್ರಾಕೃತಿಕ ದೈವಿ ಸನ್ನಿಧಿ, ಒಂದಿಷ್ಟು ವಿಶಾಲವಾದ ಸ್ಥಳ, ಚಿತ್ತ ವಿಚಿತ್ರ ಆಕಾರದ ಶಿಲೆಯ ಪದರಗಳು ಗಮನ ಸಳೆಯುತ್ತವೆ. ಗಣಪತಿಯ ಸಾನಿಧ್ಯ ತಲುಪಿದ ಮೇಲೆ ಮೇಲೇರಿದ ಶ್ರಮ ಮಾಯವಾಗುತ್ತದೆ. ಪಟ್ಟ ಶ್ರಮಕ್ಕೆ ಸಾರ್ಥಕತೆ ಮೂಡುತ್ತದೆ.
ಗಾಳಿಗುಡ್ಡ ಗಣಪತಿ ದೇವಸ್ಥಾನ ಜೈನರ ಆಳ್ವಿಕೆಯ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಹಿನ್ನೆಡೆ ಕಂಡಿತು. ಇತ್ತೀಚೆನ ವರ್ಷಗಳಲ್ಲಿ ಗಾಳಿಗುಡ್ಡ ಮಹಾಗಣಪತಿ ಗುಡಿಯ ಪೂಜೆ ಕಾರ್ಯವನ್ನು ಕೊಡ್ಗಿ ವಂಶಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ಆಡಳಿತ ಮೊಕ್ತೇಸರರಾಗಿ ಎ. ಶಂಕರನಾರಾಯಣ ಕೊಡ್ಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯರು ಉತ್ಸವಕ್ಕೆ ಸಹಕಾರ ನೀಡುತ್ತಾರೆ.
ಈ ಗ್ರಾಮವು ನಾಲ್ಕು ಉಪಗ್ರಾಮ ಹೊಂದಿದ್ದು ಕೆಳಸುಂಕದಲ್ಲಿ ಈಶ್ವರ ದೇವಸ್ಥಾನ, ಜಡ್ಡಿನಗದ್ದೆಯಲ್ಲಿ ಗಾಳಿಗುಡ್ಡ ಮಹಾಗಣಪತಿ, ಬಳ್ಮನೆ ಚತುರ್ಮುಖ ಬ್ರಹ್ಮ, ಹಾಗೆ ಕೆಳದಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ ಹೊಂದಿದ್ದು. ಎಲ್ಲದಕ್ಕೂ ಒಂದಕ್ಕೊಂದು ಸಂಬಂಧ ಹೊಂದಿದೆ.
ಉಡುಪಿ ಜಿಲ್ಲೆಯಲ್ಲಿರುವ ನಿಸರ್ಗದತ್ತ ಅಪೂರ್ವ ದೇವಸ್ಥಾನಗಳಲ್ಲಿ ಇದೂ ಒಂದು. ಇಲ್ಲಿಗೆ ಹೋಗುವುದು ಶ್ರಮದಾಯಕ ಆದ್ದರಿಂದ ಪ್ರಚಾರದಿಂದ ಹಿಂದಿದೆ. ವರ್ಷಕ್ಕೊಮ್ಮೆ ಡಿ.25ರಂದು ಸಾವಿರಕ್ಕಿಂತಲೂ ಹೆಚ್ಚು ಜನ ಗಾಳಿಗುಡ್ಡ ಏರುತ್ತಾರೆ.
ಚಾರಣಿಗರು, ಪ್ರವಾಸಿಗರು ಇಲ್ಲಿಗೆ ಹೋಗುವುದಾದರೆ ಸ್ಥಳೀಯರಿಂದ ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ಹೋಗುವುದು ಒಳಿತು.