ಮಾರಣಕಟ್ಟೆ ಹಬ್ಬದಲ್ಲಿ ನೈಕಂಬ್ಳಿ ಸಂಯೋಜನೆಯ ಯಕ್ಷಸಂಕ್ರಾಂತಿ ಯಕ್ಷಗಾನ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮಕರ ಸಂಕ್ರಾಂತಿಯಂದು ಮಾರಣಕಟ್ಟೆ ಹಬ್ಬದಲ್ಲಿ ಜರುಗಿದ ಪಾವಂಜೆ ಮೇಳದ ಯಕ್ಷಗಾನ ಬಯಲಾಟದಲ್ಲಿ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ನಾಗರಾಜ್ ಶೆಟ್ಟಿ ನೈಕಂಬ್ಳಿ ನೇತೃತ್ವದ ಯಕ್ಷ ಸಂಕ್ರಾಂತಿಯ ‘ಕಿರೀಟ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ದಂಪತಿಗಳಿಬ್ಬರನ್ನು ಸನ್ಮಾನ ಪೀಠದಲ್ಲಿ ಕುಳ್ಳಿರಿಸಿ ಮಲ್ಲಿಗೆ ಮಾಲೆ ವಿನಿಮಯ ಮಾಡಿಕೊಂಡು ಸನ್ಮಾನ ಸ್ವೀಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಂದಾವರ ರಘುರಾಮ ಶೆಟ್ಟಿ ಅವರು, ಯಕ್ಷಗಾನ ಅಮೋಘವಾದ ಜಾನಪದ ಕಲೆ. ದೀರ್ಘವಾಗಿ ಸಾಗಿ ಬಂದ ಈ ಕಲೆ ವಿಚಾರಶೀಲರು, ಜಿಜ್ಞಾಸುಗಳು, ಸಾಮಾನ್ಯ ಹಳ್ಳಿಯ ಜನರನ್ನೂ ತಲುಪುವ ಸಾಮರ್ಥ್ಯ ಹೊಂದಿದ ಪ್ರಭಾವಿ ಕಲೆಯಾಗಿದೆ. ಯಕ್ಷಗಾನಕ್ಕೆ ಅಳಿವಿಲ್ಲ ಇದಕ್ಕೆ ಮುಂದೆಯೂ ಕೂಡಾ ಎಲ್ಲರ ಪ್ರೋತ್ಸಾಹ ಸಿಗುವಂತಾಗಬೇಕು ಎಂದರು.
ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮಾತನಾಡಿ, ಕಂದಾವರ ರಘುರಾಮ ಶೆಟ್ಟರನ್ನು ‘ಯಕ್ಷಭೀಷ್ಮ’ ಎನ್ನಬಹುದು. ಆ ಕಾಲದಲ್ಲಿಯೇ ಯಕ್ಷಗಾನಕ್ಕೆ ಉತ್ಕೃಷ್ಟ ಕೃತಿಗಳನ್ನು ನೀಡುವ ಮೂಲಕ ಕಲೆಯ ಅಭ್ಯುದಯಕ್ಕೆ ಕಾರಣರಾದರು. ಅವರು ಯಕ್ಷ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಸಲ್ಲಬೇಕಿತ್ತು. ಹಾಗೆ ಯಕ್ಷಸಂಕ್ರಾಂತಿ ಮೂಲಕ ಬೆಂಗಳೂರಲ್ಲಿ 10 ವರ್ಷ ಯಕ್ಷಗಾನ ಪ್ರದರ್ಶನ, ಸಾಧಕರಿಗೆ ಸನ್ಮಾನ ಮಾಡಿರುವ ನಾಗರಾಜ ನೈಕಂಬ್ಳಿ ಅವರು ಹುಟ್ಟೂರಲ್ಲಿ ಯಕ್ಷಸಂಕ್ರಾಂತಿ ಅಯೋಜಿಸುತ್ತಿರುವುದು ಅರ್ಥಪೂರ್ಣ ಎಂದರು.
ಪಂಚಮೇಳಗಳ ಯಜಮಾನರಾದ ಪಿ.ಕಿಶನ್ ಹೆಗ್ಡೆ ಮಾತನಾಡಿ, ಮಕರ ಸಂಕ್ರಾಂತಿಯಂದು ಯಕ್ಷಸಂಕ್ರಾಂತಿ ಮಾರಣಕಟ್ಟೆಯಲ್ಲಿ ನೆಡೆಯುತ್ತಿರುವುದು ಅರ್ಥಪೂರ್ಣ. ಈ ಸಂದರ್ಭದಲ್ಲಿ ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟರಿಗೆ ‘ಕಿರೀಟ’ ಪ್ರಶಸ್ತಿ ನೀಡಿ ಗೌರವಿಸಿದ್ದು ಹೆಚ್ಚು ಔಚಿತ್ಯಪೂರ್ಣ. ಈ ಹಿಂದೆ ಅಕಾಡೆಮಿಯಲ್ಲಿ ಸಂಚಾಲಕ ಸದಸ್ಯನಾಗಿದ್ದ ಸಂದರ್ಭ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯನ್ನು ಅವರ ಮನೆಯಲ್ಲಿಯೇ ಪ್ರದಾನ ಮಾಡಲಾಗಿತ್ತು. ಅವರು ಸಲ್ಲಿಸಿರುವ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂದರು.
ಈ ಸಂದರ್ಭದಲ್ಲಿ ಪಾವಂಜೆ ಮೇಳದ ಭಾಗವತರು, ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ, ಕುಂದಾಪುರದ ಡಾ. ಬಿ.ಬಿ.ಹೆಗ್ಡೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಹುಂತ್ರಿಕೆ ಸುಧಾಕರ ಶೆಟ್ಟಿ, ಡಾ.ಬಿ.ಬಿ.ಹೆಗ್ಡೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ಕೊತ್ತಾಡಿ ಉಮೇಶ ಶೆಟ್ಟಿ, ಪಿ.ಎಸ್.ಗ್ರೂಫ್‌ನ ಆಡಳಿತ ನಿರ್ದೇಶಕರಾದ ಪ್ರಶಾಂತ್ ಶೆಟ್ಟಿ, ಉದ್ಯಮಿಗಳಾದ ಉದಯ ಶೆಟ್ಟಿ ಜಡ್ಕಲ್, ರಘುರಾಮ ಶೆಟ್ಟಿ ಎಳ್‌ಮುಡಿ, ಬ್ರಹ್ಮಶ್ರೀ ಅಗರಬತ್ತಿಗಳು ಇದರ ಸದೀಪ್ ಶೆಟ್ಟಿ ಹಾಗೂ ಯಕ್ಷಸಂಕ್ರಾಂತಿಯ ರೂವಾರಿ ನಾಗರಾಜ ಶೆಟ್ಟಿ ನೈಕಂಬ್ಳಿ ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಅಗರಬತ್ತಿಯ ನೂತನ ಉತ್ಪನ್ನವನ್ನು ಬಿಡುಗಡೆಗೊಳಿಸಲಾಯಿತು. ಉದಯ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮ’ ಯಕ್ಷಗಾನ ಪ್ರದರ್ಶನಗೊಂಡಿತು. ಮಲ್ಯಾಡಿ ಲೈವ್ ಮೂಲಕ 40ಸಾವಿರಕ್ಕೂ ಹೆಚ್ಚು ಮಂದಿ ಯಕ್ಷಗಾನ ವೀಕ್ಷಿಸಿದರು.