ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿಗೆ ಸಮೀಪದ ಕೋಟೇಶ್ವರ ರಥಬೀದಿಯ ನಿವಾಸಿ ಪ್ರಸಿದ್ಧ ಸ್ವರ್ಣೋದ್ಯಮಿ ಚಂದ್ರಮೋಹನ್ ಶೇಟ್ (72) ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಸಾಂಪ್ರದಾಯಿಕವಾಗಿ ಚಿನ್ನ – ಬೆಳ್ಳಿ ಆಭರಣಗಳನ್ನು ತಯಾರಿಸುವ ಕೋಟೇಶ್ವರದ ಪ್ರತಿಷ್ಠಿತ ಶೇಟ್ ಕುಟುಂಬದಲ್ಲಿ ಜನಿಸಿದ ಚಂದ್ರಮೋಹನ್, ತನ್ನ ತಂದೆಯವರಿಂದ ಆಭರಣ ತಯಾರಿ ಕರಕುಶಲತೆಯನ್ನು ಕಲಿತಿದ್ದರು. ಪದವಿ ವಿದ್ಯಾಭ್ಯಾಸದ ನಂತರ ಆಗಿನ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರಿದ ಅವರು ಕೋಟೇಶ್ವರ, ಸಾಸ್ತಾನ ಮುಂತಾದೆಡೆ ಸೇವೆ ಸಲ್ಲಿಸಿದ್ದರು. ಬ್ಯಾಂಕ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು ಸ್ವರ್ಣೋದ್ಯಮದಲ್ಲೇ ತೊಡಗಿಕೊಂಡಿದ್ದರು. ಕೋಟೇಶ್ವರದಲ್ಲಿ ಜ್ಯೋತಿ ಜ್ಯುವೆಲರ್ಸ್ ಮಳಿಗೆ ಆರಂಭಿಸಿದ ಅವರು, ಜ್ಯೋತಿ ಸಿಲ್ವರ್ ಪ್ಯಾಲೇಸ್ ಎಂಬ ಸಹಸಂಸ್ಥೆಯನ್ನೂ ಹುಟ್ಟುಹಾಕಿ ಸಾಂಪ್ರದಾಯಿಕ ಮತ್ತು ನವೀನ ಮಾದರಿಯ ಚಿನ್ನ, ಬೆಳ್ಳಿ ಆಭರಣಗಳನ್ನು ತಯಾರಿಸುತ್ತಿದ್ದರು. ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರಾದ ಇವರ ಕುಟುಂಬಕ್ಕೆ ಬಹುದೊಡ್ಡ ಗ್ರಾಹಕ ಜಾಲವಿತ್ತು.
ಕೋಟೇಶ್ವರದ ಪ್ರಸಿದ್ಧ ಸೇವಾಸಂಸ್ಥೆ ಚೇತನಾ ಕಲಾರಂಗದ ಪದಾಧಿಕಾರಿಯೂ ಆಗಿದ್ದ ಚಂದ್ರಮೋಹನ್ ಆ ಸಂಸ್ಥೆಯ ಮೂಲಕ ಮತ್ತು ವಯಕ್ತಿಕವಾಗಿಯೂ ಸಾವಿರಾರು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಕ್ರೀಡೋಪಕರಣಗಳನ್ನು ನೀಡುತ್ತಿದ್ದರು. ಸಂಸ್ಥೆಯು ನಡೆಸುತ್ತಿದ್ದ ಉಚಿತ ಕಣ್ಣು ಮತ್ತು ದಂತ ಚಿಕಿತ್ಸಾ ಶಿಬಿರಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಟ್ಟಿದ್ದರು. ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಳ ಅಭಿವೃದ್ಧಿಗೂ ಸಹಕರಿಸಿದ್ದರು. ಅವರು ಪತ್ನಿ, ಮೂವರು ಪುತ್ರಿಯರು, ಸಹೋದರರು, ಸಹೋದರಿಯರನ್ನು ಅಗಲಿದ್ದಾರೆ. ಭಾನುವಾರವಷ್ಟೇ ಚಂದ್ರಮೋಹನ್ ತಮ್ಮ ತಂದೆಯ ಶ್ರಾದ್ಧ ಕಾರ್ಯ ನೆರವೇರಿಸಿದ್ದರು.
ಶೇಟ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಸಹೋದ್ಯೋಗಿಗಳು, ಆಪ್ತರು ಅವರ ನಿವಾಸಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಶ್ರೀ ಕೋಟಿಲಿಂಗೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಶ್ರೀ ಕೋದಂಡರಾಮ ಮಂದಿರ ಸಮಿತಿ ಅಧ್ಯಕ್ಷ ಹಲಸಿನಕಟ್ಟೆ ಶ್ರೀನಿವಾಸ ರಾವ್, ಶ್ರೀ ಮಹಾದೇವಿ ಮಾರಿಯಮ್ಮ ದೇವಳ ಅರ್ಚಕ ಸುರೇಶ್ ಜೋಗಿ ಇನ್ನಿತರರು ಅಂತಿಮ ನಮನ ಸಲ್ಲಿಸಿದರು.
ಚೇತನಾ ಸಂಸ್ಥೆಯ ಗೌರವಾಧ್ಯಕ್ಷ, ನಂದಿನಿ ಹೋಟೆಲ್ ಸಮೂಹಗಳ ಮಾಲಿಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಶೇಟ್ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ಕೋಟೇಶ್ವರದ ರುದ್ರಭೂಮಿಯಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು.