ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬನ್ನಾಡಿ ಗ್ರಾಮದ ಸಂಜೀವ ಶೆಟ್ಟಿಯವರ ಕೃಷಿ ಭೂಮಿಯಲ್ಲಿನ ಶಾಸನವನ್ನು ಶ್ರೀ ಬಿ.ಕುಶ ಆಚಾರ್ಯ ಅವರು ಪತ್ತೆಮಾಡಿದ್ದು ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದು.ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 12 ನೇ ಶತಮಾನದ ಕನ್ನಡ ಲಿಪಿ ಭಾಷೆಯಲ್ಲಿದ್ದು 18 ಸಾಲುಗಳನ್ನು ಒಳಗೊಂಡಿದೆ. ಸುಮಾರು 5 ಅಡಿ ಎತ್ತರ 2 ಅಡಿ ಅಗಲವನ್ನು ಹೊಂದಿರುವ ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಇಕ್ಕೆಲಗಳಲ್ಲಿ ಕೈ ಮುಗಿದು ನಿಂತಿರುವ ವ್ಯಕ್ತಿ ಹಾಗೂ ಎರಡು ಆಕಳುಗಳ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ.
ಶಾಸನದ ಹೆಚ್ಚಿನ ಸಾಲುಗಳು ತೃಟಿತಗೊಂಡಿದ್ದು, ಓದಲು ಸಾಧ್ಯವಾದ ಕೆಲವು ಸಾಲುಗಳಿಂದ ಶಾಸನವು ಆಳುಪ ದೊರೆ ಒಂದನೇ ಕುಲಶೇಖರನ ಕಾಲಕ್ಕೆ ಸೇರಿದ್ದು ಎಂದು ಹೇಳಬಹುದು. ಶಾಸನದಲ್ಲಿ ಶಕವರುಷ 1112 ನೆಯ ಸಾಧಾರಣ ಸಂವತ್ಸರದ ಜೇಷ್ಠ ಮಾಸ 11 ಗುರುವಾರ ಎಂಬ ಕಾಲಮಾನದ ಉಲ್ಲೇಖವಿದ್ದು ಇದು ಕ್ರಿ.ಶ 1190 ಕ್ಕೆ ತಾಳೆಯಾಗುತ್ತದೆ. ಕುಲಶೇಖರನು ಮಂಗಳಾಪುರದ ಅರಮನೆಯಲ್ಲಿದ್ದು (ಮಂಗಳೂರು) ಈ ಸಂದರ್ಭದಲ್ಲಿ ಬನಹಾಡಿಯ ಬಸಪ್ಪನು ದೇವರ ನಿತ್ಯ ನೈವೇದ್ಯಕ್ಕೆ ನೀಡಿದ ಭೂ ದಾನದ ವಿವರವನ್ನು ಶಾಸನವು ತಿಳಿಸುತ್ತದೆ.
ಶಾಸನದಲ್ಲಿ ಉಲ್ಲೇಖಗೊಂಡಂತಹ ಬನಹಾಡಿ ಎಂಬುದು ಪ್ರಸ್ತುತ ಬನ್ನಾಡಿಯ ಪ್ರಾಚೀನ ಹೆಸರಾಗಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಕಾರ್ಯ ಸಂದರ್ಭದಲ್ಲಿ ಪ್ರವೀಣ್ ಡಿ ಆಚಾರ್ಯ ಸಾಲಿಗ್ರಾಮ, ಕಿಶನ್ ಕುಮಾರ್ ಮೂಡುಬೆಳ್ಳೆ ಹಾಗೂ ಸ್ಥಳೀಯರು ಸಹಕಾರ ನೀಡಿದರು.