ಕುಂದಾಪುರ: ಸಂಭ್ರಮದಿಂದ 73ನೇ ಗಣರಾಜ್ಯೋತ್ಸವ ಆಚರಣೆ

0
854

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ವಿಶ್ವದಲ್ಲೇ ಅತ್ಯಂತ ದೊಡ್ಡ ಸಂವಿಧಾನ ಎನ್ನುವ ವೈಶಿಷ್ಟತೆಯನ್ನು ಹೊಂದಿರುವ ನಮ್ಮ ಸಂವಿಧಾನದ ಅನುಷ್ಠಾನ ಮತ್ತು ಸಾಗಿ ಬಂದ ಹಾದಿಯನ್ನು ಸ್ಮರಿಸುವುದರೊಂದಿಗೆ ಮುಂದಿನ ದಿನಗಳನ್ನ ಯೋಜಿಸುವ ಸಂದರ್ಭವೂ ಇದಾಗಿದೆ. “ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು” ಎಂದು ಪ್ರತಿಪಾದಿಸಿದ್ದನ್ನು ಮಂಡಿಸಿ ಅನುಷ್ಠಾನ ಮಾಡಿದ ಪುಣ್ಯ ದಿನವಿದು ಎಂದು ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ ಹೇಳಿದರು.

Click Here


ಅವರು ಬುಧವಾರ ತಾಲೂಕು ಆಡಳಿತದ ವತಿಯಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ಜರುಗಿದ 73 ನೇ ಗಣರಾಜ್ಯೋತ್ಸವದ ದ್ವಜಾರೋಹಣಗೈದು ಸಂದೇಶ ನೀಡಿದರು.

ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಪ್ರಜಾಪ್ರಭುತ್ವದ ತಳಹದಿಯ ಮೇಲೆ ದೇಶವನ್ನು ನವನಿರ್ಮಾಣ ಮಾಡುವ ನಮ್ಮ ಹಿರಿಯರ ಆಶಯಗಳಿಗೆ ಚಾಲನೆ ನೀಡಿದ ದಿನವೂ ಇದಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ಸಾರಥ್ಯದಲ್ಲಿ ಎಲ್ಲಾ ಮಹನೀಯರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಬಯಸುತ್ತೇನೆ. ಅನೇಕ ಶಿಕ್ಷಣ ತಜ್ಞರು, ಮುತ್ಸದ್ಧಿಗಳು, ಜನಪ್ರತಿನಿಧಿಗಳು ಭವಿಷ್ಯದ ದೃಷ್ಟಿಯಿಂದ 2ವರ್ಷ 11 ತಿಂಗಳು 18 ದಿನ ಒಟ್ಟು 166 ಸಭೆಗಳ ಮೂಲಕ ರೂಪುಗೊಳಿಸಿದ ಸಂವಿಧಾನವು, ಜನತೆಯ ಹಕ್ಕುಗಳ ಮೂಲವಾಗಿ ಸಮರ್ಪಿತವಾಗಿದ್ದು, ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಸಮಾನತೆ ಇದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನುವ ತತ್ವದ ಮೇಲೆ ಆಧಾರಿತವಾಗಿರುವುದು ಉಲ್ಲೇಖನೀಯವಾಗಿದೆ ಎಂದರು.

ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ಪಾಲನೆಯ ಜೊತೆಗೆ ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳನ್ನು ನಾವು ದೃಢವಾಗಿ ಎದುರಿಸಬೇಕಾಗಿದೆ. ಕೋವಿಡ್‌ನಂತಹ ಸಾಮೂಹಿಕ ಆತಂಕಗಳ ನಡುವೆಯೇ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕರಾವಳಿಯ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟತೆಯನ್ನು ಜಗತ್ತಿಗೆ ಇನ್ನಷ್ಟು ಪರಿಚಯಿಸಿ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕಾಯಕಲ್ಪ ನೀಡಬೇಕಾಗಿದೆ. ಸಮಾನತೆ, ಸಹೋದರತ್ವ, ಸಾಮಾಜಿಕ ನ್ಯಾಯದ ಆಶಯಗಳ ಮೇಲೆ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಅನುಷ್ಠಾನ ಮಾಡುವ ಬದ್ಧತೆಯೂ ನಮ್ಮದಾಗಿದ್ದು ಇದರ ಫಲಶ್ರುತಿಯನ್ನು ಸರ್ವವರ್ಗಗಳಿಗೂ ತಲುಪಿಸುವ ಪ್ರಯತ್ನ ನಮ್ಮದಾಗಿದೆ. ಶಿಕ್ಷಣ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವ ನಮ್ಮ ಕರಾವಳಿ ಪ್ರದೇಶದಲ್ಲಿ ಕಿರುಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ದಿಸೆಯಲ್ಲಿ ಆದ್ಯತೆಯನ್ನಾಗಿ ಪರಿಗಣಿಸಿ ಕಾರ್ಯೋನ್ಮಖವಾಗಬೇಕಾಗಿದೆ. ಸಾಮಾಜಿಕ ಭದ್ರತೆಯ ಯೋಜನೆಗಳನ್ನು ವ್ಯವಸ್ಥಿತವಾಗಿ ನಾಗರಿಕರಿಗೆ ತಲುಪಿಸುವುದರಲ್ಲಿ ಮುಂಚೂಣಿಯಲ್ಲಿರುವ ನಮ್ಮ ಜಿಲ್ಲೆ ಹೊಸ ಪರಿಕಲ್ಪನೆಗಳನ್ನೂ ರಾಜ್ಯಕ್ಕೆ ನೀಡಿದೆ ಎಂದರು.

ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು‌. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಸಂದೀಪ್ ಖಾರ್ವಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಡಿವೈಎಸ್ಪಿ ಶ್ರೀಕಾಂತ್, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ ವಿ, ಗಿರೀಶ್ ಜಿಕೆ, ಚಂದ್ರಶೇಖರ್ ಖಾರ್ವಿ, ಪುಷ್ಪ ಶೇಟ್, ರತ್ನಾಕರ್, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಕುಸುಮಾಕರ್ ಶೆಟ್ಟಿ ಮತ್ತಿತರರು ಇದ್ದರು.

ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಗೈದರು. ಕುಂದಾಪುರ ನಗರ ಠಾಣಾಧಿಕಾರಿ ಸದಾಶಿವ್ ಆರ್ ಗವರೋಜಿ ಗೌರವ ವಂದನೆ ಸಲ್ಲಿಸಿದರು‌‌. ಪಥಸಂಚಲನದಲ್ಲಿ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ ಸಿಬ್ಬಂದಿಗಳು ಭಾಗವಹಿಸಿದರು. ಸೈಂಟ್ ಜೋಸೇಫ್ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ನೊಂದಿಗೆ ಪಥಸಂಚಲನಕ್ಕೆ ಸಹಕರಿಸಿದರು.

ತಹಸೀಲ್ದಾರ್ ಕಿರಣ್ ಗೌರಯ್ಯ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರ ಶೇಖರ್ ಬೀಜಾಡಿ ನಿರೂಪಿಸಿದರು‌.

ಕೃಷಿ ಸಾಧಕರಿಗೆ ಸನ್ಮಾನ:
2020-21 ನೇ ಸಾಲಿನ‌ ಭತ್ತದ ಬೆಳೆ ಸ್ಪರ್ಧೆಯಲ್ಲಿ ವಿಜೇತ ಕೃಷಿಕರಾದ ಸೂರ್ಯನಾರಾಯಣ್ ಜೋಯಿಸ್ ಕಿರಿಮಂಜೇಶ್ವರ, ರಾಜೇಂದ್ರ ಪೂಜಾರಿ ನಾವುಂದ, ರಾಮಚಂದ್ರ ನಾವಡ ಕಿರಿಮಂಜೇಶ್ವರ ಹಾಗೂ 2021-22 ನೇ ಸಾಲಿನ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಹೈನುಗಾರಿಕೆಯಲ್ಲಿ ಕೆ ಜಗನ್ನಾಥ್ ಪೂಜಾರಿ ಹೊಂಬಾಡಿ ಮಂಡಾಡಿ, ನೀರು ನಿರ್ವಹಣೆಯಲ್ಲಿ ಆನಂದ ಗಾಣಿಗ ಹೆಮ್ಮಾಡಿ, ತೋಟಗಾರಿಕೆಯಲ್ಲಿ ಎಚ್ ವಿ ರಾಜು ಗಾಣಿಗ ತೆಗ್ಗರ್ಸೆ, ಮೀನುಗಾರಿಕೆಯಲ್ಲಿ ಗಣೇಶ್ ಖಾರ್ವಿ ಉಪ್ಪುಂದ ಅವರಿಗೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here