ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕರ್ನಾಟಕ ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ, ಸಪ್ತ ಮೋಕ್ಷಪ್ರದ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಮಹಾತೊಬಾರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ 67 ವರ್ಷಗಳ ನಂತರ ಇದೀಗ ಆಗಮಿಸಿರುವ ಬ್ರಹ್ಮಕಲಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುಮಾರು ಮೂರು ಕೋಟಿ ರೂ. ಗಳಿಗೂ ಹೆಚ್ಚು ವೆಚ್ಚದ ಜೀರ್ಣೋದ್ಧಾರ ಕಾಮಗಾರಿಗಳು ಬಹುತೇಕ ಅಂತಿಮಗೊಂಡಿದ್ದು, ಕೊನೇ ಕ್ಷಣದ ಸಣ್ಣಪುಟ್ಟ ಕಾರ್ಯಗಳು ನಡೆಯುತ್ತಿವೆ. ಕೋಣಿ ಕೃಷ್ಣದೇವ ಕಾರಂತ ನೇತೃತ್ವದ ಜೀರ್ಣೋದ್ಧಾರ ಸಮಿತಿಯು ಈಗಾಗಲೇ ದೇವಳ ಗರ್ಭಗುಡಿ, ಎಡನಾಳಿ ಛಾವಣಿಗಳನ್ನು ನವೀಕರಿಸಿ, ತಾಮ್ರಾಚ್ಚಾದನೆ ಮಾಡಲಾಗಿದೆ. ಅಡಿಗೆ ಮನೆ ನವೀಕರಿಸಿ, ಅತ್ಯಾಧುನಿಕ ಅಡಿಗೆ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ನೀರು ಹರಿವಿಗಾಗಿ ಸ್ಟೀಲ್ ಹರಣಿ, ಪೈಪುಗಳನ್ನು ಜೋಡಿಸಲಾಗಿದೆ. ದೇವಾಲಯ ಮತ್ತು ಎಲ್ಲ ಪರಿವಾರ ದೇವರುಗಳ ಗುಡಿಗಳು ಹೊಸ ಬಣ್ಣ, ಹೊಸ ನಾಮಫಲಕ ಹೊತ್ತು ಹೊಸ ಕಳೆಯಿಂದ ರಾರಾಜಿಸುತ್ತಿವೆ. ಇಡೀ ವಠಾರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.
73 ಅಡಿ ಎತ್ತರದ ಧ್ವಜಸ್ತ0ಭವನ್ನು ಕ್ರೇನ್ ಗಳ ಸಹಾಯದಿಂದ ನಿಲ್ಲಿಸಲಾಗಿದ್ದು, ಅದಕ್ಕೆ ತಾಮ್ರ ಹೊದಿಕೆಯ ರಿಂಗ್ ಗಳನ್ನು ಜೋಡಿಸಲಾಗಿದೆ. ಶಿಲ್ಪಿ ರಾಜಗೋಪಾಲ ಆಚಾರ್ಯ ಮತ್ತು ತಂಡದವರು ಹಗಲಿರುಳು ಈ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ. ಧ್ವಜಸ್ಥ0ಭದ ಮೇಲೆ ವಿರಾಜಮಾನನಾಗಲಿರುವ ಸುಮಾರು 10 ಕಿಲೋ ಭಾರದ ಎರಕದ ಕಂಚಿನ ನಂದಿ ಮಿರುಗುಟ್ಟುತ್ತಾ ಪೂಜೆಗೆ ಅಣಿಯಾಗಿದೆ. ಫೆ.10 ರಂದು ಧ್ವಜಸ್ಥ0ಭ ವಿಧ್ಯುಕ್ತವಾಗಿ ಪ್ರತಿಷ್ಠಾಪನೆಗೊಳ್ಳಲಿದ್ದು ಅದರ ಮುನ್ನ ಶಿಲಾ ಪಾಣಿಪೀಠ, ಲೋಹದ ಅಷ್ಟಲಕ್ಷ್ಮೀ ವಿಗ್ರಹವನ್ನು ಅಳವಡಿಸಲಾಗುವುದು.
ದೇವಳ ಒಳ ಸುತ್ತಿನಲ್ಲಿರುವ ಕೆಲವು ಬಲಿ ಮೂರ್ತಿಗಳು ದೋಷ ಹೊಂದಿದ್ದು, ಅವುಗಳ ಬದಲಿಗೆ ಹೊಸ ಶಿಲಾ ಬಲಿಮೂರ್ತಿಗಳನ್ನು ರಚಿಸಲಾಗಿದ್ದು, ತಂತ್ರಿಗಳು ಪೂಜೆ ನೆರವೇರಿಸಿದ್ದಾರೆ. ಬ್ರಹ್ಮ ಕಲಶಾಭಿಷೇಕದ ಕಲಶಗಳನ್ನು ಮಹಿಳಾ ಸ್ವಯಂ ಸೇವಕರು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಶಿಲ್ಪಿ ರಾಜಗೋಪಾಲ ಆಚಾರ್ಯ ಇವರೊಂದಿಗೆ ಎಲ್ಲ 32 ಉಪಸಮಿತಿಗಳ ಅಖೈರು ಸಭೆ ನಡೆಸಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್, ಕಾರ್ಯಪ್ರಗತಿಯ ಮಾಹಿತಿ ಪಡೆದು, ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಎಲ್ಲ ಉಪಸಮಿತಿಗಳ ಸುಗಮ ಕಾರ್ಯಾಚರಣೆಗಾಗಿ ಸಮನ್ವಯ ಸಮಿತಿ ಮತ್ತು ಹಠಾತ್ ತಲೆದೋರಬಹುದಾದ ಸಮಸ್ಯೆಗಳ ನಿವಾರಣೆಗಾಗಿ ಆಪತ್ರಕ್ಷಕ ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲಾಗಿದೆ.
ರಥಬೀದಿಯಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧಗೊಳ್ಳುತ್ತಿದ್ದು, ರಥಬೀದಿ ಮತ್ತು ನಗರದ ಮುಖ್ಯ ರಸ್ತೆಗಳಲ್ಲಿ ವರ್ಣಮಯ ಲೈಟಿಂಗ್ ಅಳವಡಿಕೆ ನಡೆದಿದೆ. ರಥಬೀದಿಯಲ್ಲೇ ಇರುವ ಶ್ರೀ ಮಹಾದೇವಿ ಮಾರಿಯಮ್ಮ ದೇವಾಲಯದವರು ಈಗಾಗಲೇ ದೇವಾಲಯಕ್ಕೆ ಅತ್ಯಾಕರ್ಷಕವಾದ ದೀಪಾಲಂಕಾರ ಮಾಡಿದ್ದಾರೆ.
ಫೆ.7ರ ಸೋಮವಾರ ನಸುಕಿನ 5 ಗಂಟೆಗೆ ಶ್ರೀ ಗಣಪತಿ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಆರಂಭಗಗೊಳ್ಳಲಿವೆ. ನಸುಕಿನ 5.30ಕ್ಕೆ ರಥಮುಹೂರ್ತ ನಡೆಯಲಿದೆ. 8 ಗಂಟೆಯಿಂದ ಪ್ರಾಕಾರಶುದ್ಧಿ ಶತರುದ್ರ ಕಲಶ ಸ್ಥಾಪನೆ, ಶತರುದ್ರ ಪಠಣ, ಗಣಯಾಗ, ಶತರುದ್ರಾಭಿಷೇಕ, ಮಹಾಪೂಜೆ, ಮಧ್ಯಾನ್ಹ ಮುಹೂರ್ತೋತ್ಸವ, ಸಂಜೆ ಪ್ರದೋಷ ಪೂಜೆ, ರಾತ್ರಿ ಮಹಾಪೂಜೆ ನಡೆಯಲಿವೆ. ಸೋಮವಾರದಿಂದಾರಂಭಿಸಿ ಪ್ರತಿದಿನವೂ ವಿಶೇಷ ಪೂಜೆ, ಧಾರ್ಮಿಕ ವಿಧಿಗಳು ನಡೆಯುತ್ತವೆ.
ಫೆ.10ರ ಗುರುವಾರ ಬೆಳಿಗ್ಗೆ 7.40ರ ಕುಂಭ ಲಗ್ನದಲ್ಲಿ ನೂತನ ಧ್ವಜಸ್ಥ0ಭ ಪ್ರತಿಷ್ಠೆ, ಧ್ವಜಾರೋಹಣ ಇತ್ಯಾದಿಗಳು ನಡೆಯಲಿವೆ. ರಾತ್ರಿ ದೊಡ್ಡ ರಂಗಪೂಜೆ, ಮಯೂರ ವಾಹನೋತ್ಸವ ನಡೆಯುತ್ತವೆ.
15ರ ಮಂಗಳವಾರ ಬೆಳಿಗ್ಗೆ 8ಕ್ಕೆ ಬ್ರಹ್ಮ ಕಲಶಾಭಿಷೇಕ ಇತ್ಯಾದಿ ಪೂಜೆಗಳು,ಮಧ್ಯಾನ್ಹ ಮಹಾ ಅನ್ನಸಂತರ್ಪಣೆ ನಡೆಯುವುದು.
ಫೆ.16ರ ಬುಧವಾರ ಮಧ್ಯಾನ್ಹ 12.5 ರ ಅಭಿಜಿನ್ ಲಗ್ನದಲ್ಲಿ ಶ್ರೀಮನ್ ಮಹಾರಥೋತ್ಸವ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ರಥಬೀದಿಯ ಶ್ರೀ ವಾದಿರಾಜ ಕಲ್ಯಾಣ ಮಂಟಪದಲ್ಲಿ ಉಚಿತ ಪಾನಕ ವ್ಯವಸ್ಥೆ, ಪೇಟೆಯಲ್ಲಿ ಉಚಿತ ಮಜ್ಜಿಗೆ ವಿತರಣೆ ಇದೆ. ಮರುದಿನ ಫೆ.17 ರಂದು ಬೆಳಗಿನ ಜಾವ
ಚೂರ್ಣೋತ್ಸವದೊಂದಿಗೆ ಬ್ರಹ್ಮ ಕಲಶೋತ್ಸವ ವಿಧಿಗಳು ಸಮಾಪನಗೊಳ್ಳುತ್ತವೆ.
ಉತ್ಸವಗಳ ಎಲ್ಲಾ ದಿನಗಳಲ್ಲೂ ಶತರುದ್ರಾದಿ ವಿವಿಧ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ಭಜನೆ ನಡೆಯುತ್ತವೆ.
ಫೆ 10ರ ಗುರುವಾರ ಬೆಳಿಗ್ಗೆ 8.45ಕ್ಕೆ ರಥಬೀದಿಯ ಶ್ರೀ ಕೋಟಿಲಿಂಗೇಶ್ವರ ವಿಶೇಷ ವೇದಿಕೆಯಲ್ಲಿ ಸರ್ವ ವಾದ್ಯಗಳ ನಿನಾದದೊಂದಿಗೆ ಸಾಂಸ್ಕತಿಕ ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ.
ಇದು ವಿಶೇಷ ಬ್ರಹ್ಮತಥೋತ್ಸವವಾದುದರಿಂದ ಈ ಬಾರಿ ದೇವರ ನಗರ ಸಂಚಾರದ
ಕಟ್ಟೆ ಪೂಜೆಗಳು ಇರುವುದಿಲ್ಲ. ಗುರುವಾರದಿಂದ ಪ್ರತಿರಾತ್ರಿಯೂ ವಿವಿಧ ವಾಹನೋತ್ಸವಗಳು ರಥಬೀದಿಯ ಕೊನೆಯ ಬಸವನಗುಡಿಯವರೆಗೆ ಮಾತ್ರ ಸಾಗಲಿವೆ. ಅಂಗಡಿ, ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ, ಸ್ಥಳಗಳನ್ನು ತೆರೆಯಲು ಸಜ್ಜಾಗಿದ್ದಾರೆ. ಜೈ0ಟ್ ವೀಲ್, ಟೋರಾ ಟೋರಾಗಳು ಸಜ್ಜಾಗಿವೆ. ಉತ್ಸವಗಳಲ್ಲಿ ಎಲ್ಲೆಡೆ ಸರ್ಕಾರದ ಕೋವಿಡ್ ರಕ್ಷಣಾ ಮಾರ್ಗಸೂಚಿಗಳನ್ನು ಎಲ್ಲೆಡೆ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಹಾಗೂ ಸದಸ್ಯರು, ಜೇರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಹಾಗೂ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಹಾಗೂ ಸದಸ್ಯರು, ಅರ್ಚಕ – ಸಿಬಂದಿ ವರ್ಗದವರು, ಸರ್ವ ಉಪಸಮಿತಿಗಳವರು ಶಿಲ್ಪಿ ರಾಜಗೋಪಾಲ ಆಚಾರ್ಯ ತಂಡದವರು, ಸ್ವಯಂ ಸೇವಕರು ಹಾಗೂ ಗ್ರಾಮಸ್ಥರು ಉತ್ಸವ ಯಶಸ್ಸಿಗಾಗಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.