ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ದೇವಾಲಯದ ಎಲ್ಲ ಕಾರ್ಯಗಳಲ್ಲೂ ಅನ್ನದಾನಕ್ಕೆ ತುಂಬಾ ಮಹತ್ವವಿದೆ. 67 ವರ್ಷಗಳ ನಂತರ ನಡೆಯುತ್ತಿರುವ ಕೋಟೇಶ್ವರದ ಮಹತೊಬಾರ ಶ್ರೀ ಕೋಟಿಲಿಂಗೇಶ್ವರನ ಬ್ರಹ್ಮಕಲಶೋತ್ಸವದಲ್ಲಿ ಊರ, ಪರವೂರ ಬಹುಸಂಖ್ಯೆಯ ಭಕ್ತರನ್ನು ನಿರೀಕ್ಷಿಸಲಾಗಿದೆ. ಭಕ್ತಿಯಿಂದ ಕೋಟೀಶನೆಡೆಗೆ ಬಂದವರು ಯಾವುದೇ ಕೊರತೆ ಅನುಭವಿಸಬಾರದು ಎಂಬುದು ಎಲ್ಲ ಸಮಿತಿಗಳವರು ಹಾಗೂ ಊರವರ ಆಶಯ. ಒಳ್ಳೆಯ ಆಹಾರ ಒಳ್ಳೆಯ ಮನಸ್ಥಿತಿಗೆ ಕಾರಣ. ಆದ್ದರಿಂದ ಯಾರೂ ಪ್ರಸಾದ ಭೋಜನ ಸ್ವೀಕರಿಸದೆ ಹೋಗಬಾರದು ಎಂಬ ಸದಾಶಯದೊಂದಿಗೆ ಇಂದು ಬ್ರಹ್ಮಕಲಶೋತ್ಸವ ಪಾಕಶಾಲೆಯಲ್ಲಿ ಅಗ್ನಿ ಜನನ ನೆರವೇರಿಸಲಾಗಿದೆ. ಎಲ್ಲ ಸಮಿತಿಗಳವರು, ಅರ್ಚಕ ಸಿಬಂದಿ ವರ್ಗದವರು ಏಕಾಭಿಪ್ರಾಯದಿಂದ ಭಕ್ತಸೇವೆ ನಡೆಸಿ, ಶ್ರೀ ಕೋಟಿಲಿಂಗೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ಪುರೋಹಿತ ಕಟ್ಕೇರಿ ವಿಶ್ವನಾಥ ಐತಾಳ ಹರಸಿದರು.
ಕೋಟೇಶ್ವರದ ಮಹತೊಬಾರ ಶ್ರೀ ಕೋಟಿಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಸಮಾರಂಭದ ಭೋಜನ ಶಾಲೆಯಲ್ಲಿ ಭಾನುವಾರ ಅಗ್ನಿ ಜನನ ಕಾರ್ಯಕ್ರಮ ನೆರವೇರಿಸಿ ಅವರು ಆಶೀರ್ವದಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ – ರುಕ್ಮಿಣಿ ದಂಪತಿ ಅಗ್ನಿ ಪೂಜೆ ಮತ್ತು ಪ್ರಜ್ವಲನ ವಿಧಿಗಳನ್ನು ನೆರವೇರಿಸಿದರು. ಪಾಕಶಾಸ್ತ್ರಜ್ಞ ಕೊಡ್ಲಾಯ ಮತ್ತು ಪ್ರಕಾಶ್ ಮಂಜ ಪೂಜೆ ನೆರವೇರಿಸಿದರು. ದೊಡ್ಮನೆಬೆಟ್ಟು ಶ್ರೀ ಮುಖ್ಯಪ್ರಾಣ ದೇಗುಲದ ಅರ್ಚಕ ವೈ. ಎನ್. ವೆಂಕಟೇಶಮೂರ್ತಿ ಭಟ್ ಸಹಕರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ, ಉತ್ಸವಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಪ್ರಸಾದ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಸಮಿತಿಗಳವರು, ಕಾರ್ಯಕರ್ತರು, ಸ್ವಯಂ ಸೇವಕರು, ಗ್ರಾಮಸ್ಥರು ಒಂದಾಗಿ ಉತ್ಸಾಹದಿಂದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಆಗಮಿಸುವ ಎಲ್ಲರೂ ನೂಕುನುಗ್ಗಲಿಗೆ ಅವಕಾಶವಾಗದಂತೆ ತಾಳ್ಮೆಯಿಂದ ಪ್ರಸಾದ ಭೋಜನ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಸದಸ್ಯರಾದ ಚಂದ್ರಿಕಾ ಧನ್ಯ, ಮಂಜುನಾಥ ಆಚಾರ್ಯ, ಸುರೇಶ್ ಬೆಟ್ಟಿನ್, ಶಾರದಾ, ಭಾರತಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಚಪ್ಪರ ಮತ್ತು ಲೈಟಿಂಗ್ ಉಪಸಮಿತಿಯ ಪೈಂಟರ್ ನಾರಾಯಣ, ಉಗ್ರಾಣ ಉಪಸಮಿತಿಯ ಪ್ರಭಾಕರ ಗಾಣಿಗ ಹಾಗೂ ಮಂಜು ಬಿಲ್ಲವ, ರಂಗನಾಥ ಭಟ್, ವಿಠ್ಠಲದಾಸ ಭಟ್, ಅನ್ನಸಂತರ್ಪಣೆ ಉಪಸಮಿತಿಯ ಸುಬ್ಬಣ್ಣ ಶೆಟ್ಟಿ, ಸುನಿಲ್ ಜಿ. ನಾಯ್ಕ್, ಶಂಕರ ಚಾತ್ರಬೆಟ್ಟು, ಅಶೋಕ್ ಕಾಮತ್, ಪದ್ದಮ್ಮ ಹೊದ್ರಾಳಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.