ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವ ರೋಟರಿ ಸಂಸ್ಥೆ ಗ್ರಾಮೀಣ ಪ್ರದೇಶದ ಜನರಿಗಾಗಿ ಅನೇಕ ಕೊಡುಗೆಗಳನ್ನು ನೀಡಿದೆ. ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಂಪ್ಯೂಟರ್‍ಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಕಂಪ್ಯೂಟರ್‍ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ. ಹೇಳಿದರು.
ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಕಂಪ್ಯೂಟರ್‍ನ್ನು ಬುಧವಾರ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಶಾಲೆಯ ಮುಖ್ಯಶಿಕ್ಷಕಿ ಸುಮತಿ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ರಾಘವೇಂದ್ರ ಪೈ, ಗಂಗೊಳ್ಳಿ ರೋಟರಿ ಮಾಜಿ ಅಧ್ಯಕ್ಷ ವಾಸುದೇಶ ಶೇರುಗಾರ್, ಎಸ್‍ಡಿಎಂಸಿ ಸದಸ್ಯ ಅಶೋಕ ಪೂಜಾರಿ, ಸಹಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.
ಸಹಶಿಕ್ಷಕ ಶಶಿಶಂಕರ ಎಚ್.ಎಂ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಝೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.