ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಚಿತ್ರೀಕರಣಕ್ಕೆ ಆಕ್ಷೇಪ: ಸಭೆಯಿಂದ ಹೊರ ನಡೆದ ಸದಸ್ಯ

0
890
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪುರಸಭೆ ಅಧಿವೇಶನದ ಸಂದರ್ಭದಲ್ಲಿ ನಾಮ ನಿರ್ದೇಶಿತ ಸದಸ್ಯೆ ಸದನದ ಕಲಾಪವನ್ನು ಚಿತ್ರಿಕರಣ ಮಾಡಿದ್ದನ್ನು ಖಂಡಿಸಿ ವಿಪಕ್ಷ ಸದಸ್ಯರಾದ ದೇವಕಿ ಸಣ್ಣಯ್ಯ ಮತ್ತು ಚಂದ್ರಶೇಖರ್ ಖಾರ್ವಿ ಸದನದಿಂದ ಹೊರ ನಡೆದ ಘಟನೆ ನಡೆಯಿತು.
ಫೆ.28ರಂದು  ನಡೆದ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯವೊಂದಕ್ಕೆ ಸಂಬಂಧಿಸದಂತೆ ಚರ್ಚೆ ನಡೆಯುತ್ತಿರುವ ಸಂದರ್ಭ ಚಂದ್ರಶೇಖರ್ ಖಾರ್ವಿ ಚರ್ಚೆಯಲ್ಲಿ ನಿರತರಾಗಿದ್ದ ಸಂದರ್ಭವನ್ನು ನಾಮನಿರ್ದೇಶಿತ ಸದಸ್ಯೆ ಪುಷ್ಪ ಶೇಟ್ ಮೊಬೈಲ್‍ನಲ್ಲಿ ಚಿತ್ರೀಕರಣವನ್ನು ಮಾಡುತ್ತಿರುವುದನ್ನು ಆಕ್ಷೇಪಿಸಿದ ಚಂದ್ರಶೇಖರ್ ಖಾರ್ವಿ ಪುರಸಭೆಯ ಸದಸ್ಯರು ಕಲಾಪದ ವೇಳೆ ವಿಡಿಯೋ, ಪೋಟೋ ತಗೆಯಲು ಕಾಯ್ದೆಯಲ್ಲಿ ಅವಕಾಶವಿದೆಯೇ? ಸ್ವತಃ ಸದಸ್ಯರು ಚಿತ್ರೀಕರಣ ಮಾಡುವುದು ಸರಿಯಲ್ಲ. ಇದು ಖಂಡನಾರ್ಹ ಎಂದು ಆಕ್ಷೇಪ ವ್ಯಕ್ತ ಪಡಿಸಿದರು. ಆಗ ಪುಷ್ಪಶೇಟ್ ಕೂಡಾ ಈ ಹಿಂದೆ ಚಂದ್ರಶೇಖರ್ ಖಾರ್ವಿ ಅವರೂ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದರು. ಆಗ ಸದನ ಆಕ್ಷೇಪ ವ್ಯಕ್ತ ಪಡಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.
ಮಧ್ಯ ಪ್ರವೇಶ ಮಾಡಿದ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮಾತನಾಡಿ, ಕಲಾಪದ ವೇಳೆ ಪುರಸಭೆಯ ಸದಸ್ಯರು ವಿಡಿಯೋ ಚಿತ್ರಿಕರಣ ಮಾಡುವಂತಿಲ್ಲ. ಇದು ಸದನಕ್ಕೆ ಶೋಭೆಯೂ ಅಲ್ಲ.  ಯಾವ ಸದಸ್ಯರೂ ಕೂಡಾ ಸದನದ ಸಂದರ್ಭದಲ್ಲಿ ವಿಡಿಯೋ ಮಾಡಬಾರದು ಎಂದರು.
ಅಷ್ಟಕ್ಕೆ ಸುಮ್ಮನಾಗದ ಚಂದ್ರಶೇಖರ್ ಖಾರ್ವಿ ಪುಷ್ಪಶೇಟ್ ಈಗಾಗಲೇ ದಾಖಲು ಮಾಡಿರುವ ವಿಡಿಯೋವನ್ನು ಡಿಲೀಟ್ ಮಾಡಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭ ತೀವ್ರ ವಾಕ್ ಚಕಮಕಿ ನಡೆಯಿತು. ಅಧ್ಯಕ್ಷರ ಮಾತಿಗೆ ತೃಪ್ತರಾಗದ ಚಂದ್ರಶೇಖರ್ ಖಾರ್ವಿ ಹಾಗೂ ದೇವಕಿ ಸಣ್ಣಯ್ಯ ಸಭೆಯಿಂದ ಹೊರನಡೆದರು.
ಹಿರಿಯ ಸದಸ್ಯ ಮೋಹನದಾಸ ಶೆಣೈ ಮಾತನಾಡಿ ಗೌರವಾನ್ವಿತ ಸದಸ್ಯರು ತಮ್ಮ ಘನತೆ, ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕು. ವೈಯಕ್ತಿಕ ವಿಚಾರಗಳು ವಿಪರೀತ ಮಟ್ಟಕ್ಕೆ ಹೋಗಬಾರದು. ವೈಯಕ್ತಿಕ ವಿಚಾರಗಳು ಯಾವುದೇ ಕಾರಣಕ್ಕೂ ಸದನದ ಒಳಗೆ ಬರಬಾರದು. ಆರೋಗ್ಯಕರವಾದ ಚರ್ಚೆಗೆ ಅವಕಾಶವಾಗಬೇಕು. ಈ ಬಗ್ಗೆ ಅಧ್ಯಕ್ಷರು ಸ್ಪಷ್ಟವಾದ ಸಂದೇಶ ನೀಡಬೇಕು ಎಂದರು.
ಬಳಿಕ ಚಂದ್ರಶೇಖರ್ ಖಾರ್ವಿ ಮತ್ತು ದೇವಕಿ ಸಣ್ಣಯ್ಯ ಮರಳಿ ಸಭೆಗೆ ಆಗಮಿಸಿದರು.
Click Here

LEAVE A REPLY

Please enter your comment!
Please enter your name here