ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಉಡುಪಿ ಜಿಲ್ಲೆಯ ಸ್ವಾಮಿ ವಿವೇಕಾನಂದರ ದಿವ್ಯಲೀಲಾ ಕ್ಷೇತ್ರವಾದ ಡಿವೈನ್ ಪಾರ್ಕ್‍ನ ಅಂಗ ಸಂಸ್ಥೆಯಾದ ಕೋಟ ಮೂಡುಗಿಳಿಯಾರು ಸಮೀಪದ ಯೋಗಬನದಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ವಿಶೇಷ ಭೇಟಿ ನೀಡಿ ಕೇಂದ್ರವನ್ನು ಸಂಪೂರ್ಣ ವೀಕ್ಷಿಸಿ ಕೇಂದ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರದಲ್ಲಿನ ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಭವ್ಯ ಮೂರ್ತಿ, ಮೂರ್ತಿಯ ಸುತ್ತ ಕುಳಿತುಕೊಂಡು ಧ್ಯಾನ ಮಾಡಲು ಇರುವ ಉತ್ತಮ ಅವಕಾಶ, ಪ್ರಾಚೀನ ದೇಗುಲದ ವಾಸ್ತು ವಿನ್ಯಾಸ, ಪರಿಸರ ಸ್ನೇಹಿ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕೇಂದ್ರ, ಯೋಗ ಚಿಕಿತ್ಸೆ, ಸಂಗೀತ ಚಿಕಿತ್ಸೆ, ಮೌನ ಚಿಕಿತ್ಸೆ, ಹಾಸ್ಯ ಚಿಕಿತ್ಸೆ, ಆಹಾರ ಚಿಕಿತ್ಸೆಗಳ ಸಮಾಗಮ, ಅಕ್ಷಯ ಗಾಳಿ, ನೀರು, ಬೆಳಕಿನ ದಿವ್ಯ ಪರಿಸರ, ವಾಯುವಿಹಾರಕ್ಕಾಗಿ ನಿರ್ಮಿತವಾದ ಅತಿ ಉದ್ದದ ವಿಶೇಷ ವೃತ್ತ ರಸ್ತೆ, ದೃಶ್ಯ ಶ್ರವಣ ಮಾಧ್ಯಮಗಳ ಮೂಲಕ ಆರೋಗ್ಯ ಶಿಕ್ಷಣ, ಧ್ಯಾನ ಯೋಗದ ಶಿಕ್ಷಣ, ಸೈಕ್ಲಿಂಗ್ ಟ್ರ್ಯಾಕ್, ಯೋಗ ಸ್ಟುಡಿಯೋ, ಆ್ಯಂಪಿ ಥಿಯೇಟರ್, ಸುಸಜ್ಜಿತ ಸಂಶೋಧನಾ ವಿಭಾಗ, ವಿಶಾಲವಾದ ಕ್ರೀಡಾಂಗಣ ವ್ಯವಸ್ಥೆ, ಅತಿಥಿ ಗೃಹಗಳನ್ನು ವೀಕ್ಷಿಸಿ ಸಂಪೂರ್ಣ ಮಾಹಿತಿ ಪಡೆದು ಈ ಗ್ರಾಮೀಣ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗುಣ ಮಟ್ಟದ ಸುರಕ್ಷತೆಯೊಂದಿಗೆ ಸಂಪೂರ್ಣ ಪರಿಸರಸ್ನೇಹಿಯಾಗಿ ನಿರ್ಮಿಸಿದ ಈ ಸಂಸ್ಥೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಒಂದು ವಿಶೇಷ ಮತ್ತು ವಿಶಿಷ್ಟವಾದ ಸಂಸ್ಥೆಯಾಗಿದೆ. ಈ ಸ್ಥಳಕ್ಕೆ ವಿಶೇಷ ಭೇಟಿ ನೀಡಿರುವುದು ನಮಗೆ ಅತೀವ ಸಂತಸ ತಂದಿದೆ. ಲೋಕದ ವಿಸ್ಮಯ ಜಗತ್ತು ಈ ಯೋಗಬನ ಕೇಂದ್ರವಾಗಿದೆ. ಬಹಳ ಹೆಮ್ಮೆಯಿಂದ ಹೇಳ ಬಯಸುತ್ತೇವೆ. ನಮ್ಮ ಕನ್ನಡಗಿರೂ ಕಟ್ಟಿದ ಈ ಸಂಸ್ಥೆಯಲ್ಲಿನ ಪರಿಸರ, ವಾತಾವರಣ, ಇಲ್ಲಿಯ ಸ್ವಚ್ಚತೆ, ಅತಿಥಿ ಸತ್ಕಾರ, ಧಾರ್ಮಿಕ ಚಟುವಟಿಕೆ, ಇವೆಲ್ಲದರ ಜೊತೆ ಬಳಸುವ ಪ್ರಕೃತಿಕ ವಸ್ತುಗಳು, ಜೊತೆಯಲ್ಲಿ ನೀಡುವ ವಿಶೇಷ ಯೋಗ ಚಿಕಿತ್ಸೆ ಎಲ್ಲವೂ ಕೂಡ ಒಂದೇ ಸೂರಿನಡಿ ಸಿಗುವ ಹಾಗೇ ಪರಿಪೂರ್ಣವಾಗಿ ಸಂಸ್ಥೆಯನ್ನು ಕಟ್ಟಿ ಲೋಕಕ್ಕೆ ನೀಡಿದ್ದಾರೆ.
ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು, ಪೀಠಾಧಿಪತಿಗಳು, ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ.