ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಯಕ್ಷಕಾಶಿಯಲ್ಲಿ ಇತಿಹಾಸದಲ್ಲಿ ಅಮರವತಿಯ ಅಮರ ಚರಿತೆ ಯಕ್ಷಗಾನ ಪ್ರದರ್ಶನ ಹೊಸ ದಾಖಲೆ ನಿರ್ಮಿಸಿತು. ಎಮ್.ಪಿ ಬೆಳ್ಳಾಡಿ ಸಂಯೋಜನೆಯಲ್ಲಿ ಕುಂದಾಪುರದ ನೆಹರು ಮೈದಾನದಲ್ಲಿ ಜರಗಿದ ಈ ಯಕ್ಷಗಾನದಲ್ಲಿ ನಿಜ ಗಜರಾಜನ ಆಗಮನ, ತೆಂಕು ಬಡಗಿನ ಕಲಾವಿದರ ಕಲಾ ಪ್ರದರ್ಶನ, ಕಂಗೀಲು ಕುಣಿತ ಸಹಿತ ಹಲವಾರು ಆಕರ್ಷಣೆಗಳು ಒಂದೇ ಸೂರಿನಡಿ ಕಂಡು ಬಂದವು.
ಬಡಗಿನ ಪ್ರಸಿದ್ದ ಡೇರೆ ಮೇಳವಾದ ಸಾಲಿಗ್ರಾಮ ಮೇಳ ಮತ್ತು ತೆಂಕಿನ ಸುಪ್ರಸಿದ್ಧ ಪಾವಂಜೆ ಮೇಳದ ಕಲಾವಿದರು ಮಾತ್ರವಲ್ಲದೇ ಮಹಿಳಾ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಐದು ಜನ ಭಾಗವತರ ಹಾಡುಗಾರಿಕೆ, ಐದು ಮದ್ದಳೆ, ಐದು ಚಂಡೆಗಳ ವಾದನ ಕಾರ್ಯಕ್ರಮದಲ್ಲಿ ಗಮನ ಸಳೆಯಿತು.
ಕುಂದಾಪುರ ಗಾಂಧಿ ಮೈದಾನದಲ್ಲಿ ಹಲವು ದಶಕಗಳ ಬಳಿಕ ಯಕ್ಷಗಾನಕ್ಕೆ ನಿಜ ಗಜರಾಜನ ಕರೆತಂದ ಹೆಗ್ಗಳಿಗೆ ಎಂ.ಪಿ ಬೆಳ್ಳಾಡಿ ಪಾಲಾಯಿತು.
ನಾನು ಉಡುಪಿ ಜಿಲ್ಲೆಗೆ ಬಂದಷ್ಟು ಯಾವ ಜಿಲ್ಲೆಗೂ ಬಂದಿಲ್ಲ. ಉಡುಪಿ, ಕೋಟ, ಹೆಬ್ರಿ, ಕುಂದಾಪುರಕ್ಕೆ ಹಿಂದೆ ಅನೇಕ ಬಾರಿ ಬಂದಿದ್ದೆ. ಸ್ವಲ್ಪ ದಿನ ಉಡುಪಿಗೆ ಹೋಗದಿದ್ದರೆ ನಮ್ಮವರೆಲ್ಲಾ ತವರು ಮನೆಗೆ ಹೋಗೋದಿಲ್ಲವಾ ಎಂದು ಪ್ರಶ್ನಿಸುತ್ತಾರೆ. ಅಷ್ಟರಮಟ್ಟಿಗೆ ನಮ್ಮ ಉಡುಪಿ ಜಿಲ್ಲೆ ಬಳ್ಳಾರಿಯಲ್ಲಿ ಮನೆಮಾತಾಗಿದೆ. ನಾನು ಉಡುಪಿ ಜಿಲ್ಲೆಯ ಮನೆಮಗಳು. ಇದು ನನ್ನ ತವರು ಮನೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.
ಯಕ್ಷಕಾಶಿ ಕುಂದಾಪುರದ ನೆಹರೂ ಮೈದಾನದಲ್ಲಿ ಉದ್ಯಮಿ ಮಂಜುನಾಥ್ ಪೂಜಾರಿ ಬೆಳ್ಳಾಡಿ ಸಾರಥ್ಯದಲ್ಲಿ ಶನಿವಾರ ಪ್ರದರ್ಶನಗೊಂಡ ಅಮರಾವತಿಯ ಅಮರ ಚರಿತೆ ಯಕ್ಷಗಾನಕ್ಕೂ ಮುನ್ನ ನಡೆದ ಸಭಾ ಕಾರ್‍ಯಕ್ರಮದಲ್ಲಿ ದೂರದ ಹರಿಹರ ಮಠದಿಂದ ಆಗಮಿಸಿದ ನಿಜ ಗಜರಾಜನಿಂದ ಸನ್ಮಾನಗೊಂಡ ಬಳಿಕ ಮಾತನಾಡಿದರು.
ನಾವೆಲ್ಲರೂ ಅಮರಾತಿಯ ವೈಭವವನ್ನು ನಿಜವಾಗಿ ಕಂಡಿಲ್ಲ. ಆದರೆ ಮಂಜುನಾಥ ಬೆಳ್ಳಾಡಿಯವರ ಆಯೋಜನೆಯಲ್ಲಿ ನಿಜವಾದ ಆನೆಯನ್ನು ಕರೆಸಿ ಯಕ್ಷಕಾಶಿ ಕುಂದಾಪುರದಲ್ಲಿ ಅಮರಾವತಿಯನ್ನು ಸೃಷ್ಠಿ ಮಾಡಿರುವುದು ಶ್ಲಾಘನೀಯ ಕಾರ್ಯ. ವಿಶೇಷವಾಗಿ ನನ್ನನ್ನು ಸನ್ಮಾನಿಸಿ ಐರಾವತ ಮೂಲಕ ಹಾರ ಹಾಕಿ ಗೌರವ ಸಲ್ಲಿಸಿರುವುದು ನನ್ನ ಜೀವನದಲ್ಲಿ ಮರೆಯಲಾಗದ ನೆನಪುಗಳಲ್ಲೊಂದು ಎಂದರು.
ಜೋಗತಿ ಗದ್ಗದಿತ:
ನನ್ನಂತಹ ಮಗು ನಿಮ್ಮ ಮನೆಯಲ್ಲಿ ಹುಟ್ಟಿದರೆ ಖಂಡಿತ ಅವನನ್ನು ಮನೆಯಿಂದ ಹೊರಗೆ ಹಾಕಬೇಡಿ. ಅಂತಹ ಮಕ್ಕಳು ಹುಟ್ಟಿದರೆ ಅವರಿಗೆ ವಿದ್ಯಾಭ್ಯಾಸಗಳನ್ನು ಕೊಡಿಸಿ. ವಿದ್ಯಾಭ್ಯಾಸ ಕೊರತೆಯಿಂದಾಗಿ ನನ್ನ ತೃತೀಯ ಲಿಂಗಿಗಳು ಅನೈತಿಕ ಚಟುವಟಿಕೆಗಳಿಗೆ ಮುಂದಾಗುತ್ತಿದ್ದಾರೆ. ಅಂತಹ ಚಟುವಟಿಕೆಗಳು ಬಂದ್ ಆಗಬೇಕು. ಕೊಲೆಗಡುಕ ಮಗನನ್ನು ಮಗ ಎಂದು ಒಪ್ಪಿಕೊಳ್ಳುತ್ತೀರಿ. ಆದರೆ ಯಾವ ತಪ್ಪನ್ನು ಮಾಡದೇ ಇರುವ ನಮ್ಮನ್ಯಾಕೆ ಮಗ ಎಂದು ಒಪ್ಪಿಕೊಳ್ಳುವುದಿಲ್ಲ. ನೀವು ಯಾವತ್ತು ಅಂತವರನ್ನು ಒಪ್ಪಿಕೊಂಡು ತಬ್ಬಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಅನೈತಿಕ ಚಟುವಟಿಕೆಗಳು ನಿಲ್ಲುವುದಿಲ್ಲ ಎಂದು ಮಂಜಮ್ಮ ಜೋಗತಿ ಗದ್ಗದಿತರಾದರು.
ಯಕ್ಷಕಾಶಿ ಕುಂದಾಪುರದ ನೆಹರೂ ಮೈದಾನದಲ್ಲಿ ಉದ್ಯಮಿ ಮಂಜುನಾಥ್ ಪೂಜಾರಿ ಬೆಳ್ಳಾಡಿ ಸಾರಥ್ಯದಲ್ಲಿ ಶನಿವಾರ ಪ್ರದರ್ಶನಗೊಂಡ ಅಮರಾವತಿಯ ಅಮರ ವೈಭವವು ಗಜರಾಜನ ಆಗಮನ ಸಹಿತ ಹತ್ತಾರು ಹೊಸತನಕ್ಕೆ ಸಾಕ್ಷಿಯಾಯಿತು. ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಡುಪಿ ಫುಡ್ ಹಬ್‌ನ ಡಾ| ಅಶೋಕ್ ಶೆಟ್ಟಿ ಬೆಳ್ಳಾಡಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಮುಂಬಯಿನ ಆದರ್ಶ್ ಶೆಟ್ಟಿ ಹಾಲಾಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಉದ್ಯಮಿಗಳಾದ ಡಾ| ವಿಜಯಕೃಷ್ಣ ಪಡುಕೋಣೆ ಬೆಂಗಳೂರು, ಶರತ್ ಶೆಟ್ಟಿ ಬೆಳ್ಳಾಡಿ, ಜಗದೀಶ್ ಶೆಟ್ಟಿ ಕುದ್ರುಕೋಡ್, ಅರವಿಂದ್ ಪೂಜಾರಿ, ಸದಾಶಿವ ಪೂಜಾರಿ, ಸಂಘಟಕ ಮಂಜುನಾಥ್ ಪೂಜಾರಿ ಬೆಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕವಿ ಪವನ್ ಕಿರಣ್ಕೆರೆ ಪ್ರಸ್ತಾವಿಸಿ, ಅವಿನಾಶ್ ಕಾಮತ್ ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಮಹೇಶ್ ವಕ್ವಾಡಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.