ಕುಂದಾಪುರ ಮಿರರ್ ಸುದ್ದಿ…
ಕೋಟ: ಯಾವುದೇ ದೇಶದ ಆಡುವ ಆಟಗಳು ಪರಂಪರೆಗಳು ಬದಲಾಗುತ್ತಾ ಅಭಿವೃದ್ಧಿ ಹೊಂದುತ್ತಾ ಕೆಲವೊಮ್ಮೆ ನಾಶ ಹೊಂದುತ್ತಾ ಹೋಗುವ ಸಾಧ್ಯತೆಗಳಿವೆ. ಕಲೆ-ಸಾಹಿತ್ಯ-ಸಂಸ್ಕೃತಿಯ ಆಧುನಿಕ ಪ್ರಜ್ಞೆಯ ಅಗತ್ಯದ ಜೊತೆಯಲ್ಲಿ ಆಧುನಿಕೊತ್ತರ ಪ್ರಜ್ಷೆ ಇರಬೇಕು. ವಿದ್ಯುನ್ಮಾನ ಯುಗದಲ್ಲಿ ಕಲೆಯ ಜೊತೆಯಲ್ಲಿ ಹೆಚ್ಚಿನ ಅನುಸಂಧಾನದ ಅಗತ್ಯವಿದೆ ಎಂದು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಹೇಳಿದರು.
ಇತ್ತೀಚೆಗೆ ಮಾ.10ರಂದು ರಂದು ಚೇತನ ಪ್ರೌಢಶಾಲೆ ಹಂಗಾರಕಟ್ಟೆ ಜಗಜ್ಜೀವನದಾಸ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಯಕ್ಷದೇಗುಲ ಬೆಂಗಳೂರು ಹಮ್ಮಿಕೊಂಡ ಈ ಸಾಲಿನ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷಗಾನ ರಂಜನೆಯ ಜೊತೆಯಲ್ಲಿ ಪುರಾಣ ಜ್ಞಾನವನ್ನು ಒದಗಿಸಿಕೊಡುತ್ತದೆ. ಅಂತಹ ಸಂಪನ್ನ ಕಲೆಯನ್ನು ಶಾಲಾ ಭೋದನ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಸರ್ವಾಂಗ ಸುಂದರವಾದ ಯಕ್ಷಗಾನವನ್ನು ಮೊದಲು ಪ್ರದರ್ಶಿಸಿದ ವ್ಯಕ್ತಿಯ ಪ್ರತಿಭಾ ಸಂಪನ್ನತೆಯನ್ನು ನಾವು ಸದಾ ನೆನೆಯಲೆ ಬೇಕು. ಜೊತೆಯಲ್ಲಿ ನಮ್ಮ ತಲೆಮಾರಿನವರೆಗೆ ಸಂಪನ್ನವಾಗಿ ಉಳಿಸಿಕೊಂಡು ಬಂದ ಎಲ್ಲಾ ಕಲಾವಿದರ ಶ್ರಮ ಮೆಚ್ಚಲೆ ಬೇಕು ಎಂದು ಯಕ್ಷಗಾನ ವಿದ್ವಾಂಸರಾದ ಹೆಚ್ ಸುಜಯಿಂದ್ರ ಹಂದೆ ಹೇಳಿದರು.
ಚೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಜಿ ಯಕ್ಷದೇಗುಲದ ಸಂಚಾಲಕ ಸುದರ್ಶನ ಉರಾಳ ಉಪಸ್ಥಿತರಿದ್ದರು. ಭಾಗವತ ಲಂಬೋದರ ಹೆಗಡೆ ಸ್ವಾಗತಿಸಿ ಪ್ರಶಾಂತ ಮಲ್ಯಾಡಿ ವಂದಿಸಿದರು. ರಾಘವೇಂದ್ರ ತುಂಗ ಕೋಟ ನಿರೂಪಿಸಿದರು.
ಬಳಿಕ ಲಂಬೋದರ ಹೆಗಡೆ ನಿಟ್ಟೂರು, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ ಕೋಟ, ಸುಜಯೀಂದ್ರ ಹಂದೆ ಕೋಟ, ಕೃಷ್ಣಮೂರ್ತಿ ಉರಾಳ ಚಿತ್ರಪಾಡಿ, ನವೀನ ಕೋಟ, ರಾಜು ಪೂಜಾರಿ ಇವರನ್ನೊಳಗೊಂಡು ಯಕ್ಷಗಾನ ಮುದ್ರೆ, ಅಭಿನಯ, ಹೆಜ್ಜೆಗಾರಿಕೆ, ಪ್ರಯಾಣ ಕುಣಿತ, ಯುದ್ಧ ನೃತ್ಯ, ಬಣ್ಣಗಾರಿಕೆಯಿಂದ ತೊಡಗಿ ಸಂಪೂರ್ಣ ವೇಷ, ಅಟ್ಟೆ ಕೇದಗೆ ಮುಂದಲೆ ರಚನಾ ಕ್ರಮ ಕೃಷ್ಣನ ಒಡ್ಡೊಲಗ ಇತ್ಯಾದಿಗಳನ್ನೊಳಗೊಂಡ ಪ್ರಾತ್ಯಕ್ಷಿಕೆ ನೆರವೇರಿತು.