ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರಾಷ್ಟ್ರ ಧ್ವಜ ನಮ್ಮೆಲ್ಲರ ಅಭಿಮಾನದ ಸಂಕೇತ. ರಾಷ್ಟ್ರ ಧ್ವಜಕ್ಕೆ ಗೌರವ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಧ್ವಜಾರೋಹಣ, ಅವರೋಹಣ ಮಾಡುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಧ್ವಜವನ್ನು ಸಂರಕ್ಷಿಸಬೇಕಾದರೂ ಅಗತ್ಯ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕಾಗಿದ್ದು, ಅದರ ಅರಿವು ನಮಗೆಲ್ಲರಿಗೂ ಇರಬೇಕು ಎಂದು ಕುಂದಾಪುರ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿ ಶ್ವೇತಾ ಎನ್. ಹೇಳಿದರು.
ಅವರು ಬುಧವಾರ ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ತಾ.ಪಂ. ಎಲ್ಲ ಗ್ರಾ.ಪಂ.ಗಳು, ಜಿಲ್ಲಾ ಭಾರತ್ ಸೇವಾದಳ ಸಮಿತಿ ಉಡುಪಿ, ತಾಲೂಕು ಸೇವಾದಳ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ರಾಷ್ಟ್ರಧ್ವಜ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿ ಉಪಾಧ್ಯಕ್ಷ ಕೆ.ಸಿ. ರಾಜೇಶ್ ಮಾತನಾಡಿ, ರಾಷ್ಟ್ರಧ್ವಜ ನಮ್ಮ ಸಾರ್ವಭೌಮತೆಯ ಪ್ರತೀಕ. ದೇಶಭಕ್ತಿ, ರಾಷ್ಟ್ರೀಯ ಪರವಾದ ಚಿಂತನೆಯನ್ನು ಮೈಗೂಢಿಸಿಕೊಳ್ಳಲು ಧ್ವಜ ಮಹತ್ವದ ಪಾತ್ರ ವಹಿಸುತ್ತದೆ. ಆ ನಿಟ್ಟಿನಲ್ಲಿ ಸೇವಾದಳದ ವತಿಯಿಂದ ರಾಷ್ಟ್ರಧ್ವಜದ ಬಗೆಗಿನ ಮಾಹಿತಿಯನ್ನು ಪುನಶ್ಚೇತನಗೊಳಿಸುವ ಸಲುವಾಗಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಸೇವಾದಳವು ರಾಷ್ಟ್ರೀಯತೆ, ಭಾವೈಕ್ಯತೆ, ಸೌಹಾರ್ದತೆಯನ್ನು ಜಾಗೃತಗೊಳಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಕುಂದಾಪುರ ತಾ| ಸೇವಾದಳದ ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ, ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಪುಂಡಾಲೀಕ ಮರಾಠೆ ಮಾತನಾಡಿದರು.
ಉಡುಪಿ ಜಿಲ್ಲಾ ಭಾರತ್ ಸೇವಾದಳ ಸಮಿತಿಯ ಜಿಲ್ಲಾ ಕಾರ್‍ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರಧ್ವಜದ ಕುರಿತಂತೆ ಮಾಹಿತಿ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಾಪುರ ತಾ| ಅಧ್ಯಕ್ಷ ಗಣೇಶ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಕುಸುಮಾಕರ ಶೆಟ್ಟಿ ಸ್ವಾಗತಿಸಿ, ಸೇವಾದಳ ಜಿಲ್ಲಾ ಸಮಿತಿ ಸಂಘಟಕ ಪಕ್ಕೀರ ಗೌಡ ಕಾರ್‍ಯಕ್ರಮ ನಿರೂಪಿಸಿದರು.