ಬೀಜಾಡಿ ನಾಗಮಂಡಲ – ಪೂರ್ವಭಾವಿ ಸಭೆ

0
513

ಕುಂದಾಪುರ ಮಿರರ್ ಸುದ್ದಿ….

ಕುಂದಾಪುರ : ಕೋಟೇಶ್ವರ ಸಮೀಪದ ಬೀಜಾಡಿಯ ಪ್ರಸಿದ್ಧ ಗುಜಗಿ ಮನೆಯ ಮೂಲ ನಾಗಬನದಲ್ಲಿ ಮುಂಬರುವ ಏಪ್ರಿಲ್ 11ರ ಸೋಮವಾರ ಕುಟುಂಬಸ್ಥರು ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಏಕಪವಿತ್ರ ನಾಗಮಂಡಲ ಮತ್ತು ಹಾಲಿಟ್ಟು ಸೇವೆಯನ್ನು ನಡೆಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಶುಕ್ರವಾರ ಸಂಜೆ ಗುಜಗಿ ಮನೆ ವಠಾರದಲ್ಲಿ ನಡೆದ ಗ್ರಾಮಸ್ಥರು ಮತ್ತು ನಂಬಿದ ಭಕ್ತರ ಸಭೆಯಲ್ಲಿ, ಯೋಜಿತ ಉತ್ಸವಗಳನ್ನು ವ್ಯವಸ್ಥಿತವಾಗಿ ನಡೆಸಲು ಸ್ವಾಗತ ಸಮಿತಿಯೊಂದನ್ನು ರಚಿಸಲಾಯಿತು. ಬೀಜಾಡಿ ಪ್ರಕಾಶ್ ಉಪಾಧ್ಯ ಮತ್ತು ಲಕ್ಷ್ಮೀನಾರಾಯಣ ದಾಸರ ಸಂಚಾಲಕತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ವಹಿಸಲಾಯಿತು.

Click Here

ಗುಜಗಿಮನೆಯ ದಿ. ಸೀತಮ್ಮ ಕುಟುಂಬಿಕರ ಮೂಲ ನಾಗಬನದಲ್ಲಿ ಏ.11ರಸೋಮವಾರ ರಾತ್ರಿ 9.30ಕ್ಕೆ ಏಕಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಕುಲಪುರೋಹಿತ ವಿಶ್ವನಾಥ ಅಡಿಗ, ವೇದಮೂರ್ತಿ ಕೆ. ವೆಂಕಟೇಶ ಭಟ್, ಕುಂಭಾಸಿ, ವೇದಮೂರ್ತಿ ಕೆ. ನಾಗರಾಜ ಭಟ್ ಮಾರ್ಗದರ್ಶನದಲ್ಲಿ ಉತ್ಸವಗಳು ನಡೆಯಲಿವೆ. ಏ.10ರ ಭಾನುವಾರ ಬೆಳಿಗ್ಗೆ 10ಕ್ಕೆ ದೇವತಾ ಪ್ರಾರ್ಥನೆ, ಗಣಯಾಗದಿಂದ ಮಂಡಲ ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ. ಏ 11ರ ಸೋಮವಾರ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾನ್ಹ 12ಕ್ಕೆ ಮಹಾ ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಹಾಲಿಟ್ಟು ಸೇವೆ, 9ಕ್ಕೆ ಮಂಡಲ ಪೂಜೆ ಹಾಗೂ ರಾತ್ರಿ 9.30ಕ್ಕೆ ನಾಗಮಂಡಲೋತ್ಸವ ನಡೆಯುತ್ತವೆ. ಬುಧವಾರ ಬೆಳಿಗ್ಗೆ ಸಂಪ್ರೋಕ್ಷಣ ಮತ್ತು ಗಣಹೋಮದೊಂದಿಗೆ ಕಾರ್ಯಕ್ರಮಗಳು ಸಮಾಪನಗೊಳ್ಳುವುವು.

ಸಮಾಲೋಚನಾ ಸಭೆಯಲ್ಲಿ ಸಂತೋಷ್ ಕುಮಾರ್ ಸ್ವಾಗತಿಸಿದರು. ಸಂಚಾಲಕ ಪ್ರಕಾಶ್ ಉಪಾಧ್ಯ ಮಾತನಾಡಿ ಸಂತರ್ಪಣೆಗೆ ಹೊರೆಕಾಣಿಕೆ ಸಮರ್ಪಿಸುವವರು ಎ. 8ರ ಶುಕ್ರವಾರ ಮಧ್ಯಾನ್ಹದೊಳಗೆ ಕಮಲಮ್ಮ ಕಲ್ಯಾಣಮಂಟಪಕ್ಕೆ ತಲುಪಿಸಬೇಕೆಂದು ಮನವಿ ಮಾಡಿದರು. ವಾಹನ ಪಾರ್ಕಿಂಗ್ ವ್ಯವಸ್ಥೆ, ಹೊರೆಕಾಣಿಕೆ ಮೆರವಣಿಗೆ, ನೈರ್ಮಲ್ಯ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಆರತಿ ಉಪಾಧ್ಯ, ಲಕ್ಷ್ಮೀನಾರಾಯಣ ವೈದ್ಯ, ಶ್ರೀನಿವಾಸ ವೈದ್ಯ, ಗಣಪಯ್ಯ ಚಡಗ, ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಾದಿರಾಜ ಹೆಬ್ಬಾರ್ ಹಾಗೂ ಗುಲಾಬಿಯಮ್ಮ, ವಾದಿರಾಜ ಅಡಿಗ, ರಾಮ ನಾಯ್ಕ್, ವಿವಿಧ ಸಂಘ – ಸಂಸ್ಥೆಗಳವರು, ವೆಂಕಟೇಶ್ ಹೆಬ್ಬಾರ್, ವಿಜಯ ಹೆಬ್ಬಾರ್ ಹಾಗೂ ಗ್ರಾಮಸ್ಥರು ಭಾಗಿಗಳಾಗಿ ಸಲಹೆಗಳನ್ನು ನೀಡಿದರು. ವೆಂಕಟೇಶ್ ಅರಸ್ ವಂದಿಸಿದರು.

LEAVE A REPLY

Please enter your comment!
Please enter your name here