ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ತ್ರಾಸಿ ಗ್ರಾಮದ ಸೌಪರ್ಣಿಕ ನದಿಯಲ್ಲಿ ನಡೆಯುತ್ತಿರುವ ಯಂತ್ರೀಕೃತ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ತ್ರಾಸಿ, ಮೊವಾಡಿ ಹಾಗೂ ನಾಡ ಗುಡ್ಡೆಯಂಗಡಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೋರೇಶನ್ ಲಿಮಿಟಿಡ್ ಕಂಪೆನಿಯು ತ್ರಾಸಿ ಹಾಗೂ ಹೊಸಾಡು ಗ್ರಾಮದ ಸೌಪರ್ಣಿಕ ನದಿಯಲ್ಲಿ ಯಾಂತ್ರೀಕೃತ ಹೂಳೆತ್ತುವ ಕಾಮಗಾರಿ ನಡೆಸುತ್ತಿದೆ. ಇದರಿಂದ ನದಿ ಸುತ್ತಮುತ್ತಲಿನ ಗ್ರಾಮದ ನದಿ ದಂಡೆ ಕುಸಿತಕ್ಕೊಳಗಾಗಲಿದೆ, ಬಾವಿಯಲ್ಲಿ ಉಪ್ಪು ನೀರು ಬರಲಾರಂಭಿಸಿದ್ದು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಯಾಂತ್ರೀಕೃತ ಹೂಳೆತ್ತುವ ಸ್ಥಳದ ಸಮೀಪದಲ್ಲಿರುವ ಡ್ಯಾಮ್ ಒಡೆದು ಹೋಗುವ ಸಾಧ್ಯತೆ ಇದೆ, ಮೀನುಗಾರಿಕೆಗೂ ತೊಂದರೆಯಾಗಲಿದೆ. ಪ್ರತಿನಿತ್ಯ ನೂರಾರು ಲಾರಿಗಳು ಅಗಲಕಿರಿದಾದ ರಸ್ತೆಯಲ್ಲಿ ಹಗಲಿರುಳೆನ್ನದೆ ಸಂಚರಿಸುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ನಡೆಯುತ್ತಿರುವ ಯಾಂತ್ರೀಕೃತ ಹೂಳೆತ್ತುವ (ಮರಳುಗಾರಿಕೆ) ಕಾಮಗಾರಿಯನ್ನು ಸ್ಥಗಿತಗೊಳಿಸಿ ಸಾಂಪ್ರದಾಯಿಕ ಮರಳುಗಾರಿಕೆ ಅವಕಾಶ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಯಾಂತ್ರೀಕೃತ ಹೂಳೆತ್ತುವ ಕಾಮಗಾರಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಎನ್‍ಐಟಿಕೆ ಅವರಿಂದ ವರದಿ ಪಡೆಯುವಂತೆ ಗಣಿ ಇಲಾಖೆಗೆ ಸೂಚನೆ ನೀಡಿದರು. ಇಲ್ಲಿನ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತಜ್ಞರಿಂದ ವರದಿ ಬಂದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲಿಯವರಿಗೆ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಗಣಿ ಇಲಾಖೆ ಅಧಿಕಾರಿಗಳಾದ ಸಂದೀಪ್, ಸಂಧ್ಯಾ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ನಂಜಾ ನಾಯ್ಕ್, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಪ್ರಣಯ್ ಕುಮಾರ್ ಶೆಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ ಶೆಟ್ಟಿ, ಹಕ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಚೇತನ್, ತ್ರಾಸಿ ಗ್ರಾಪಂ ಸದಸ್ಯ ಮಿಥುನ್ ದೇವಾಡಿಗ, ಶ್ರೀಧರ ಬಡಾಕೆರೆ, ರಾಘವೇಂದ್ರ ಆಚಾರಿ, ನಾಗರಾಜ ಮೊಗವೀರ, ಅಶೋಕ್ ಶೆಟ್ಟಿ, ಸರೋಜ, ಪ್ರವೀಣ್ ಮೊವಾಡಿ, ಸತೀಶ ಮೊವಾಡಿ, ಕಿರಣ್ ಆನಗೋಡು ಮೊದಲಾದವರು ಉಪಸ್ಥಿತರಿದ್ದರು.
ತ್ರಾಸಿ ಹಾಗೂ ಹೊಸಾಡು ಗ್ರಾಮದ ಸೌಪರ್ಣಿಕ ನದಿಯಲ್ಲಿ ಯಾಂತ್ರೀಕೃತ ಮರಳುಗಾರಿಕೆ ನಡೆಯುತ್ತಿರುವುದು ಅಪಾಯಕಾರಿ. ಬಾವಿಗಳಲ್ಲಿ ಉಪ್ಪು ನೀರು ನುಗ್ಗುತ್ತಿದೆ, ನದಿ ದಂಡೆಗಳು ಕುಸಿಯಲಾರಂಭಿಸಿದೆ. ಸಮೀಪದಲ್ಲಿರುವ ಡ್ಯಾಮ್‍ಗೂ ಅಪಾಯವಾಗುವ ಸಾಧ್ಯತೆ ಇದೆ. ಮೀನುಗಾರಿಕೆಗೂ ತೊಂದರೆಯಾಗುತ್ತಿದ್ದು, ಈ ನದಿ ಪಾತ್ರದ ಸುಮಾರು ಐದು ಗ್ರಾಮಗಳಿಂದ ಇದರಿಂದ ಬಹಳಷ್ಟು ಅಪಾಯವಿದೆ – ಪ್ರವೀಣ್ ಕುಮಾರ್ ಶೆಟ್ಟಿ, ತ್ರಾಪಂ ಮಾಜಿ ಉಪಾಧ್ಯಕ್ಷ.
ಸರಕಾರದ ಆದೇಶದಂತೆ ಸೌಪರ್ಣಿಕ ನದಿಯಲ್ಲಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಹೂಳೆತ್ತಿದ್ದ ಮರಳನ್ನು ದಕ್ಕೆ ಹಾಕುವ ಕೆಲಸ ಮಾತ್ರ ನಮ್ಮದು. ಹೂಳೆತ್ತುವ ಕೆಲಸವನ್ನು ಸಾಂಪ್ರದಾಯಿಕವಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಾಂತ್ರೀಕೃತವಾಗಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದ್ದು, ಕಾನೂನು ಪ್ರಕಾರವೇ ಎಲ್ಲಾ ಕೆಲಸ ಮಾಡಲಾಗುತ್ತಿದೆ. ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸ್ಪಂದಿಸಲಾಗಿದೆ – ಕಿರಣ್, ಗುತ್ತಿಗೆದಾರ ಕಂಪನಿಯ ಪರವಾಗಿ.