ಕೋಡಿ: ಸೌಹಾರ್ದ ಸಂಗಮ-2022
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಅನ್ಯಾಯ ಮಾಡುವ ಖಿನ್ನತೆಗೆ ಇಸ್ಲಾಂ ಪ್ರೇರಣೆ ನೀಡುವುದಿಲ್ಲ. ನ್ಯಾಯವನ್ನು ಎತ್ತಿ ಹಿಡಿಯುವ, ಸೌಹಾರ್ದಯುತ ಬದುಕನ್ನು ಇಸ್ಲಾಂ ಪ್ರೇರೆಪಿಸುತ್ತದೆ ಎಂದು ಸುನ್ನೀ ಯುವ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಪಿ ಹೇಳಿದರು.
ಭಾನುವಾರ ಸಂಜೆ ಕೋಡಿ ಬೀಚ್ ಹತ್ತಿರ ನೂರುಲ್ ಹುದಾ ದಫ್ ಸಮಿತಿ ಆಯೋಜಿಸಿದ್ದ ಸೌಹಾರ್ದ ಸಂಗಮ-2022 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲಿಯೇ ಶ್ರೇಷ್ಠವಾದ ಲಿಖಿತ ಸಂವಿಧಾನವನ್ನು ಹೊಂದಿರುವ ದೇಶ ಭಾರತ. ಈ ನಾಡಿನ ವೈವಿಧ್ಯತೆ, ವಿವಿಧತೆಯಲ್ಲಿ ಏಕತೆಯ ಬದುಕು ವಿಶ್ವಕ್ಕೆ ಹಿರಿಮೆಯನ್ನು ತಂದುಕೊಟ್ಟಿದೆ. ಸೌಹಾರ್ದಯುತವಾದ ಬದುಕನ್ನು ಎಲ್ಲಾ ಧರ್ಮಗಳು ಪ್ರತಿಪಾದಿಸಿವೆ. ಯಾವ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸಿಲ್ಲ. ಶಾಂತಿ, ಸಾಮರಸ್ಯೆತೆಯಿಂದ ನಾವು ಬದುಕಬೇಕಾಗಿದೆ ಎಂದರು.
ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂದನೀಯ ಸ್ಟ್ಯಾನಿ ತಾವ್ರೊ ಮಾತನಾಡಿ, ಮಾನವೀಯ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ. ಎಲ್ಲಾ ದೇವ ಮಂದಿರಗಳು ನಮ್ಮಲ್ಲಿ ನಿರ್ಮಲ ಭಾವ ಮೂಡಿಸಲು ಇರುವಂತದ್ದು. ನಿರ್ಮಲ ಭಾವದಿಂದ ಮಾತ್ರ ಭ್ರಾತೃತ್ವ ಬಾಂಧವ್ಯ ಸಾಧ್ಯ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ, ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಮಾತನಾಡಿ, ವಿಶ್ವಗುರುವಾಗುವತ್ತ ಮುನ್ನಡೆಯುತ್ತಿರುವ ಭಾರತಕ್ಕೆ ಮತೀಯ ಸಂಘರ್ಷ ಕಂಠಕವಾಗಿದೆ. ಪ್ರತಿಯೊಂದು ಜಾತಿ, ಧರ್ಮದ ಜನರು ಸಹೋದರತೆಯಿಂದ ಬಾಳುವುದರಿಂದ ಮಾತ್ರ ಭಾರತ ವಿಶ್ವಗುರು ಆಗಲು ಸಾಧ್ಯ. ಎಲ್ಲೆಡೆ ಸಹೋದರತೆಯ ಸಂಗಮ ಆಗಬೇಕು ಎಂದರು.
ಸುನ್ನಿ ಯುವ ಜನ ಸಂಘ ರಾಜ್ಯಾಧ್ಯಕ್ಷ ಡಾ.ಎಸ್.ಎಂ.ಅಬ್ದುಲ್ ರಶೀದ್ ಜೈನಿ ಕಾಮಿಲ್ ಸಖಾಫಿ, ನೇಶನಲ್ ಪೆÇಲಿಟಿಕಲ್ ಎನಾಲಿಸ್ಟಿಕ್ ಅಬ್ದುಲ್ ರಜಾಕ್ ಖಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮಹಮ್ಮದ್ ರಫೀಕ್ ಗಂಗೊಳ್ಳಿ, ನಮ್ಮ ನಾಡ ಒಕ್ಕೂಟ ಕುಂದಾಪುರ ಅಧ್ಯಕ್ಷ ದಸ್ತಗೀರ್, ಮುಖಂಡರಾದ ಜಿ.ಎಂ.ಮುಸ್ತಾಫಾ, ದಫ್ ಸಮಿತಿ ಅಧ್ಯಕ್ಷ ಮಹಮ್ಮದ್ ಕೆ., ಉಪಾಧ್ಯಕ್ಷ ಅಬ್ದುಲ್ಲ ರಜಾಕ್, ಪುರಸಭೆ ಸದಸ್ಯ ಅಶ್ಪಾಕ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಮುನಾಫ್ ಕೋಡಿ ಸ್ವಾಗತಿಸಿದರು. ಅರ್ಶಾದ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ರಾಜ್ಯಮಟ್ಟದ ದಪ್ ಸ್ಪರ್ಧೆ ಜರುಗಿತು.