ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ನವ ಮಾಸಗಳ ಕಾಲ ಹೊತ್ತು, ಹೆತ್ತು, ಬೆಳೆಸುವ ತಾಯಿಗೆ, ಭಾರತೀಯ ಪರಂಪರೆಯ ಕುಟುಂಬ ಹಾಗೂ ಸಮಾಜದಲ್ಲಿ ಮಹತ್ವದ ಸ್ಥಾನ-ಮಾನಗಳಿವೆ. ಸಕಾಲದಲ್ಲಿ ಯೋಗ್ಯ ಶಿಕ್ಷಣ ದೊರಕುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಉದ್ಯಮಿ ಜಿ.ದತ್ತಾನಂದ ಗಂಗೊಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಡಾ.ಅಂಬೇಡ್ಕರ್ ಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪುರಸಭೆ, ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಹಾಗೂ ಮಕ್ಕಳ ಹಿತ ರಕ್ಷಣಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಅಭಿವೃದ್ಧಿ ಹಾಗೂ ಬೆಳವಣಿಗೆಯ ಬಗ್ಗೆ ಪ್ರತಿ ಮಾತೆಯೂ ಕಾಳಜಿ ವಹಿಸಬೇಕು. ಮಕ್ಕಳ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಿದಾಗ, ಕುಟುಂಬದಲ್ಲಿ ಸಂತೋಷ ಮೂಡುತ್ತದೆ. ವಿದ್ಯೆ ನಮಗೆ ಬದುಕನ್ನು ಕಟ್ಟಿಕೊಡುತ್ತದೆ. ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕುವುದರಿಂದ ಸ್ವಾಭಿಮಾನದ ಜೀವನವನ್ನು ಸಾಧಿಸಲು ಅನೂಕೂಲವಾಗುತ್ತದೆ. ಕರ್ತವ್ಯದಿಂದ ವಿಮುಖರಾಗದೆ, ಪ್ರತಿಯೊಬ್ಬರು ಸಮಾಜಮುಖಿಯಾಗಿ ಬೆಳೆಯಲು ಕಟಿಬದ್ಧರಾಗಬೇಕು ಎಂದು ಹೇಳಿದ ಅವರು ಇತ್ತೀಚಿನ ದಿನಗಳಲ್ಲಿ ಹಿರಿಯರು ವೃದ್ಧಾಶ್ರಮಗಳನ್ನು ಸೇರುತ್ತಿರುವುದು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿ ಎಂದರು.
ಪುರಸಭೆಯ ಕಂದಾಯ ಅಧಿಕಾರಿ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ದೇವಕಿ ಪಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ವನಿತಾ ಎಸ್ ಬಿಲ್ಲವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ಇದ್ದರು.
ಮಕ್ಕಳ ಹಿತ ರಕ್ಷಣಾ ವೇದಿಕೆಯ ಉಷಾ ಕೆ ಪ್ರಾಸ್ತಾವಿಕ ಮಾತನಾಡಿದರು, ಸ್ವಪ್ನ ಕೆ ಸ್ವಾಗತಿಸಿದರು, ಹರ್ಷವರ್ಧನ ಖಾರ್ವಿ ನಿರೂಪಿಸಿದರು.