ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ರಾಜ್ಯಾದ್ಯಂತ ಇಂದಿನಿಂದ ಎಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಎರಡು ದಿನಕ್ಕೆ ಸೀಮಿತವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಈ ಬಾರಿ 6 ದಿನಗಳ ಕಾಲ ನಡೆಯಲಿದ್ದು, ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಖುಷಿಖುಷಿಯಿಂದ ಆಗಮಿಸಿದರು.
ಅದರಂತೆಯೇ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8 ಗಂಟೆಯಿಂದಲೇ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಜ್ಯೂನಿಯರ್ ಕಾಲೇಜು) 8 ವಿವಿಧ ಶಾಲೆಗಳಿಂದ ಆಗಮಿಸಿದ ಪರೀಕ್ಷಾ ಕೇಂದ್ರ ಇದಾಗಿತ್ತು. ಇಲ್ಲಿ ಒಟ್ಟು 486 ವಿದ್ಯಾರ್ಥಿಗಳ ಪೈಕಿ 7 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು. ಇಂದು ಪ್ರಥಮ ಭಾಷೆ ಕನ್ನಡ ಅಥವಾ ಸಂಸ್ಕೃತ ಭಾಗದಲ್ಲಿ ಪರೀಕ್ಷೆ ನಡೆಯುತ್ತಿದ್ದು 1.45 ಕ್ಕೆ ಪರೀಕ್ಷೆ ಮುಗಿಯಲಿದೆ.
ಕುಂದಾಪುರ ಜ್ಯೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಕೋಡಿ ಬ್ಯಾರೀಸ್ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆಗಮಿಸಿದ್ದರು. ಆ ಶಾಲೆಯಲ್ಲಿ ಅವರ ಪೈಕಿ 7 ಮಂದಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿಯರಿದ್ದು ಅವರು ಸಮಸವಸ್ತ್ರದ ದುಪ್ಪಟ್ಟದ ಹಿಜಾಬ್ ಧರಿಸಿ ಬಂದು ಪರೀಕ್ಷೆ ಬರೆದರು.
ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪೂರ್ವ ಮತ್ತು ನಂತರ ಸ್ಯಾನಿಟೈಸರ್ ಮಾಡುವ ಮೂಲಕ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಇನ್ನು ಬೇರೆ ಬೇರೆ ಶಾಲೆಯಲ್ಲಿ ಕಲಿತು ಈ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರಲು ಆತಂಕ ಮೊದಲಾದವುಗಳಿರುವುದು ಮತ್ತು ಹಿಜಾಬ್ ಗೊಂದಲಗಳಿಗೆ ತಮ್ಮ ಮಕ್ಕಳು ದೃತಿಗೆಡಬಾರದೆಂಬ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಪರೀಕ್ಷಾ ಕೇಂದ್ರದ ತನಕ ಬಿಟ್ಟು ಧೈರ್ಯ ತುಂಬಿ ಹೋಗುತ್ತಿದ್ದ ದೃಶ್ಯ ಕಂಡುಬಂದಿತ್ತು.