ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು ಎಂಬ ಪದ್ಯದ ಸಾಲುಗಳ ಮೂಲಕ ವಿವಿಧ ಬಣ್ಣದ ರಂಗೋಲಿಗಳಿಂದ ರಚಿಸಲಾದ ಭಾರತದ ಭೂಪಟದ ಜತೆಯಲ್ಲಿ ಭಾರತ ಮಾತೆಯ ರಂಗವಲ್ಲಿ ಚಿತ್ರಕ್ಕೆ ಕೋಟೇಶ್ವರ ಪಬ್ಲಿಕ್ ಸ್ಕೂಲ್‍ನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಣತೆ ಹಚ್ಚಿ ದೀಪ ಬೆಳಗಿಸಿ ಬೀಳ್ಕೋಡುಗೆ ಪಡೆದುಕೊಂಡ ವಿನೂತನ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಡಾ.ಉಪಾಧ್ಯಾಯ ಮೂಡುಬೆಳ್ಳೆ ಇವರ ನೇತೃತ್ವದಲ್ಲಿ 8 ಅಡಿ ಎತ್ತರದ 7 ಅಡಿ ಅಗಲದ ಭಾರತ ದೇಶದ ಭೂಪಟದ ಜತೆ ಮಧ್ಯದಲ್ಲಿ ಭಾರತ ಮಾತೆಯ ಚಿತ್ರಣವನ್ನು ರಚಿಸಲಾಗಿತ್ತು. ಶಾಲೆಯ 2022ನೇ ಸಾಲಿನ 126 ಮಂದಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ವೇದಿಕೆಗೆ ಬಂದು ತಮ್ಮ ಭಾವೈಕ್ಯತೆಯ ಸಂದೇಶದೊಂದಿಗೆ ಸರ್ವಧರ್ಮಗಳ ಮಾನವೀಯತೆಯ ಪ್ರತಿಬಿಂಬವನ್ನು ಸಾರುವ ಹಣತೆಗಳ ಮೂಲಕ ಭಾರತ ಮಾತೆ ಹಾಗೂ ಭಾರತ ಭೂಪಟದ ಸುತ್ತ ಎಲ್ಲಾ ವಿದ್ಯಾರ್ಥಿಗಳು ಸೇರಿಕೊಂಡು ಜಾತಿ ಮತ ಭೇದವೆನ್ನದೆ ಹಣತೆಗಳನ್ನು ಹಚ್ಚಿ ಭಾವೈಕ್ಯತೆಯ ಸಂದೇಶದ ಪ್ರತಿಜ್ಞೆ ಸ್ವೀಕರಿಸಿ ಭಾರತ ಮಾತೆಯ ಆಶೀರ್ವಾದವನ್ನು ಪಡೆದುಕೊಂಡು ಪುಳಕೀತರಾದರು.
ಕೆಪಿಎಸ್ ಉಪಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಎಸ್ ಪ್ರಾಂಶುಪಾಲ ಡೆನ್ನಿಸ್ ಬಾಂಜೆ, ಎಸ್‍ಎಸ್‍ಎಲ್‍ಸಿ ತರಗತಿ ಶಿಕ್ಷಕರಾದ ದಿವ್ಯಾಪ್ರಭಾ, ಸಂಧ್ಯಾ, ಅನುರಾಧಾ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಣಮ್ಯ ಸ್ವಾಗತಿಸಿದರು. ಮೇಘನಾ ಮತ್ತು ಪಾಲ್ಗುಣಿ ಕಾರ್ಯಕ್ರಮ ನಿರೂಪಿಸಿದರು. ಮಾನ್ಯ ವಂದಿಸಿದರು.
ಭಾರತದಲ್ಲಿ ಆನೇಕ ಜನಾಂಗಗಳು, ಪಂಗಡಗಳು ಇರುವಂತಹ ಒಂದು ವಿಶಾಲವಾದ ದೇಶ. ಇಲ್ಲಿ ವಿವಿಧ ಭಾರತೀಯ ಸಂಸ್ಕøತಿಗಳು, ಧರ್ಮ ಜಾತಿಗಳ ಜನರು ತಮ್ಮ ವಿವಿಧತೆಯನ್ನು ಮರೆತು ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆಯನ್ನು ತಿಳಿಸುವ ಉದ್ದೇಶ ಹಾಗೂ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಕಾರಣದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚಂದ್ರಶೇಖರ ಶೆಟ್ಟಿ, ಉಪಪ್ರಾಂಶುಪಾಲರು, ಕೆಪಿಎಸ್ ಸ್ಕೂಲ್, ಕೋಟೇಶ್ವರ.
ಎಳೆವೆಯಲ್ಲಿಯೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಾವೈಕ್ಯತೆಯನ್ನು ಸಾರುವುದಲ್ಲದೆ ಸಕಾರಾತ್ಮಕ ಚಿಂತನೆಯನ್ನು ವೃದ್ಧಿಸುವ ಜೊತೆಯಲ್ಲಿ ಸಮಾನತೆ ಮತ್ತು ದೇಶ ಭಕ್ತಿಯನ್ನು ಬೆಳಸುವ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಆಯೋಜಿಸಿದ್ದೇವೆ. ಎಲ್ಲಾ ವಿದ್ಯಾರ್ಥಿಗಳು ತುಂಬು ಮನಸ್ಸಿನಿಂದ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ದೇಶಭಿಮಾನ ಮತ್ತು ಭಾವೈಕ್ಯತೆಯ ಮಹತ್ವವನ್ನು ತಿಳಿದುಕೊಂಡಿದ್ದಾರೆ.
ಡಾ.ಉಪಾಧ್ಯಾಯ ಮೂಡುಬೆಳ್ಳೆ, ರಾಷ್ಟ್ರಪ್ರಶಸ್ತಿ ಪುರಸ್ಕøತ ಚಿತ್ರಕಲಾ ಶಿಕ್ಷಕರು, ಕೆಪಿಎಸ್ ಸ್ಕೂಲ್, ಕೋಟೇಶ್ವರ.
ಇಲ್ಲಿ ರಚನೆಯಾಗಿರುವುದು ಕೇವಲ ಭಾರತ ದೇಶದ ಭೂಪಟವಲ್ಲ. ಈಗಾಗಲೇ ಭೂಪಟದ ಸುತ್ತ ಹಣತೆ ಹಚ್ಚಿ ಭಾವೈಕ್ಯತೆಯ ಸಂದೇಶದ ಜೊತೆ ಪ್ರತಿಜ್ಞೆ ಸ್ವೀಕರಿಸಿದ್ದೇವೆ. ನಮ್ಮ ಪವಿತ್ರ ದೇಶದ ಯಾವ ಭಾಗದಲ್ಲದರೂ ವಿದ್ಯಾಭ್ಯಾಸದ ಬಳಿಕ ಐಎಎಸ್ ಮಾಡಿ ಉನ್ನತ ಹುದ್ದೆಗೆ ಹೋಗಿ ಭಾರತೀಯನಾಗಿ ಸೇವೆ ಮಾಡಲು ಸಿದ್ಧನಿದ್ದೇನೆ. ವಿನೂತನ ಕಾರ್ಯಕ್ರಮದ ಮೂಲಕ ನಮ್ಮ ಮುಂದಿನ ಜವಾಬ್ದಾರಿಯ ಅರಿವನ್ನು ಮೂಡಿಸಿದ ಶಾಲಾ ಶಿಕ್ಷಕರಿಗೆ ಆಭಾರಿಯಾಗಿದ್ದೇವೆ.
ಸುರಕ್ಷಾ, 10ಸಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ, ಕೆಪಿಎಸ್ ಸ್ಕೂಲ್, ಕೋಟೇಶ್ವರ.
ಜೀವನದಲ್ಲಿ ಎಂದೂ ಮರೆಯಲಾಗದ ಸಂತಸ ಕ್ಷಣದ ದಿನವಾಯಿತು. ನಮ್ಮಳೊಗಿನ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ದೇಗುಲದಲ್ಲಿ ಜ್ಯೋತಿಯ ಪ್ರಜ್ವಲತೆಯ ಮೂಲಕ ಹೊಸ ಬದುಕಿನ ದಾರಿ ತೋರಿಸಿದ ಶಿಕ್ಷಕ ವರ್ಗಕ್ಕೆ ಕೃತಜ್ಞತೆಗಳು.
ಭೂಷಣ್, 10ಬಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ, ಕೆಪಿಎಸ್ ಸ್ಕೂಲ್, ಕೋಟೇಶ್ವರ.