ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ದಾನ ಮಾಡಲು ಸಂಪತ್ತು ಬೇಕು. ಕೈ ತುಂಬ ಸಂಪತ್ತುಗಳಿದ್ದರೂ ದಾನ ಮಾಡಲು ಮನಸ್ಸಿಲ್ಲದ ಅದೆಷ್ಟೂ ಮಂದಿ ನಮ್ಮ ಮುಂದೆ ಕಾಣಸಿಗಲಿದ್ದಾರೆ. ಇದು ನಮ್ಮ ದೇಶದ ದೌರ್ಭಾಗ್ಯ. ಅಂತವರಿಗೆ ಪ್ರವೀಣ್ ಕುಮಾರ್ ಶೆಟ್ಟಿಯವರು ಮಾದರಿಯಾಗಿದ್ದಾರೆ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ-ಫಾರ್ಚೂನ್ ಗ್ರೂಫ್ ಆಫ್ ಹೊಟೇಲ್, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಕಾರ್ಲ್ ಜೈಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ಅಲೋಕಾ ವಿಷನ್ ಪ್ರೋಗ್ರಾಂ ಇವರ ಜಂಟಿ ಆಶ್ರಯದಲ್ಲಿ ವಕ್ವಾಡಿಯ ಕನಕ ಸಭಾಂಗಣದಲ್ಲಿ ಗುರುವಾರ ಜರುಗಿದ ಉಚಿತ ಕನ್ನಡಕ ವಿತರಣಾ ಸಮಾರಂಭದಲ್ಲಿ ಕನ್ನಡಕ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಅವರ ಸೇವಾ ಮನೋಭಾವಕ್ಕೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಾಧನೆಗೆ ಸಿಕ್ಕಿರುವ ಆರ್ಹ ಗೌರವವಾಗಿದೆ. ಪ್ರವೀಣ್ ಕುಮಾರ್ ಶೆಟ್ಟಿ ಅವರಂತಹ ದಾನದ ಗುಣಗಳ ವ್ಯಕ್ತಿಗಳು ಸಿಗುವುದು ಅಪರೂಪ. ಹೆತ್ತವರ ಪುಣ್ಯದ ಫಲವಾಗಿ ವಕ್ವಾಡಿ ಗ್ರಾಮಕ್ಕೆ ಹೆಮ್ಮೆಯ ಸುಪುತ್ರ ಸಿಕ್ಕಂತಾಗಿದೆ ಎಂದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ನನಗೆ ಲಭಿಸಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕುರಿತು ಏರ್ಪಡಿಸಲಾದ ಹುಟ್ಟೂರ ಸನ್ಮಾನದ ಕಾರ್ಯಕ್ರಮದಲ್ಲಿ ನಮ್ಮೂರ ಗ್ರಾಮಸ್ಥರು ಹಾಗೂ ನನ್ನ ಸ್ನೇಹಿತರು ಮತ್ತು ನನ್ನ ಹಿತೈಷಿಗಳು ತೋರಿಸಿದ ಪ್ರೀತಿಗೆ ಆಭಾರಿಯಾಗಿದ್ದೇನೆ ಎಂದರು.
ನಾರಾಯಣ ಶೆಟ್ಟಿ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ.ಕೃಷ್ಣಪ್ರಸಾದ್, ಪ್ರವೀಣ್ ಕುಮಾರ್ ಶೆಟ್ಟಿ ಹೂಟ್ಟೂರ ಸನ್ಮಾನ ಸಮಿತಿ ಕಾರ್ಯದರ್ಶಿ ವೇಣುಗೋಪಾಲ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಉಪಸ್ಥಿತರಿದ್ದರು.
ವೇಣುಗೋಪಾಲ ಹೆಗ್ಡೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ದಿನಕರ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ ವಂದಿಸಿದರು.