ಕುಂದಾಪುರ ಮಿರರ್ ಸುದ್ದಿ…
ಕೋಟ: ಭಾಷೆ ಮತ್ತು ಸಂಸ್ಕೃತಿಯ ಮೇಲೆ ಅಭಿರುಚಿ ಮೂಡಿಸುವಲ್ಲಿ ಇಂತಹ ಶಿಬಿರಗಳು ಹೆಚ್ಚು ಉಪಯುಕ್ತ. ಪ್ರಾಚೀನ ಕಾಲದ ಗುರುಕುಲ ಪದ್ಧತಿಯನ್ನು ನೆನಪಿಸುವ ಈ ಶಿಬಿರದ ವಾತಾವರಣವೇ ವಿಭಿನ್ನವಾಗಿದ್ದು ಮಕ್ಕಳ ಮನಸ್ಸುಗಳನ್ನು ಅರಳಿಸುವಲ್ಲಿ ಇಲ್ಲಿನ ತಂಡ ಶ್ರಮಿಸುತ್ತದೆ. ಇಂತಹ ಶಿಬಿರಗಳು ಕಲೆಯನ್ನು ಕಲಿಸುವುದಷ್ಟೇ ಅಲ್ಲ, ಕಲೆಯ ಸೌಂದರ್ಯವನ್ನು ಹೇಗೆ ಆಸ್ವಾದಿಸಬೇಕೆನ್ನುವುದನ್ನೂ ಕಲಿಸುತ್ತದೆ. ಒಟ್ಟಿನಲ್ಲಿ ಪರಿಶ್ರಮ ಫಲಶುೃತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಕುಂದಾಪುರ ಆದರ್ಶ ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಡಾ. ಆದರ್ಶ ಹೆಬ್ಬಾರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತೆಕ್ಕಟ್ಟೆ ಹಯಗ್ರೀವದ ಸಮೀಪದ ಹಾಡಿಯಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ “ರಜಾರಂಗು-2022” ಒಂದು ತಿಂಗಳ ಅವಧಿಯ ಚಿಣ್ಣರ ಬೇಸಿಗೆ ಶಿಬಿರವನ್ನು ಡಾ. ಆದರ್ಶ ಹೆಬ್ಬಾರ್ ಉದ್ಘಾಟಿಸಿ ಮಾತನ್ನಾಡಿದರು.
ಬೇರೆ ಬೇರೆ ಸಂಸ್ಕೃತಿ ಆಚಾರ ವಿಚಾರಗಳ ಹಿನ್ನೆಲೆಯಿಂದ ಬಂದಂತಹ ಮಕ್ಕಳು ಒಂದಷ್ಟು ದಿನ ಒಟ್ಟಾಗಿ ಆಡುತ್ತಾ, ಕಲಿಯುತ್ತಾ, ನಲಿಯುತ್ತಾ ಹೊಸ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿ ಎಂದು ಶಿಬಿರದ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಹೇಳಿದರು.
ಹಿರಿಯ ವಿಠ್ಠಲ್ ಪೈ ಸಾಲಿಗ್ರಾಮ, ಶ್ರೀ ಕೃಷ್ಣ ಐಸ್‍ಕ್ರೀಂ ಮಾಲಕ ಮಂಜುನಾಥ ಪ್ರಭು ಉದ್ಯಮಿ, ಗಣೇಶ್ ಸಿಲ್ಕ್ಸ್ ಮಾಲಕ ಅಂತನ ನಾಯಕ್ ತೆಕ್ಕಟ್ಟೆ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಪ್ರಶಾಂತ್ ಮಲ್ಯಾಡಿ, ಶಂಕರನಾರಾಯಣ ಉಪಾಧ್ಯ, ಸುಹಾಸ ಕರಬ, ವಿಜೀತ್ ಮಲ್ಯಾಡಿ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಪ್ರಸ್ತಾವನೆಯ ಮಾತನ್ನಾಡಿದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಸೀತಾರಾಮ ಶೆಟ್ಟಿ ಕೊೈಕೂರು ಸ್ವಾಗತಿಸಿ, ಕು| ಪೂಜಾ ಆಚಾರ್ ಧನ್ಯವಾದಗೈದರು. ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮೇ 8ರ ತನಕ ನಡೆಯುವ ಶಿಬರವು ಚಿಣ್ಣರು ರೇಖೆಗಳನ್ನು ಬರೆಯುವ ಮೂಲಕ ಚಾಲನೆ ನೀಡಿದರು.