ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಗಾಣಿಗ ಸಮುದಾಯವು ತುಂಬಾ ಹಿಂದುಳಿದ ಸಮಾಜವಾಗಿದ್ದು ಈ ಸಮಾಜವನ್ನು ಶೈಕ್ಷಣಿಕವಾಗಿ ಮೇಲೆತ್ತಬೇಕು ಎನ್ನುವ ಸದುದ್ದೇಶದಿಂದ ಪ್ರಪ್ರಥಮವಾಗಿ ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಗಾಣಿಗ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಹಾಗೂ ಇನ್ನಿತರೆ ಉನ್ನತ ಹುದ್ದೆಗಳಿಗೆ ತರಬೇತಿ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಯುವ ಮಾನಸ ಗಾಣಿಗ ಎಜುಕೇಶನಲ್ ಟ್ರಸ್ಟ್‍ನ್ನು ಸ್ಥಾಪಿಸಲಾಗಿದ್ದು ಎ.14 ಗುರುವಾರದಂದು ರಾಮ ಲಕ್ಷ್ಮಣ ಸಭಾಭವನ ಹೆಮ್ಮಾಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟಿ ಕೆ.ಎಂ.ಶೇಖರ್ ತಿಳಿಸಿದ್ದಾರೆ.
ಅವರು ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಟ್ರಸ್ಟನ್ನು ಕುಮಟಾ ಶಾಸಕರಾದ ದಿನಕರ್ ಶೆಟ್ಟಿ ಅವರು ಉದ್ಘಾಟನೆ ಮಾಡಲಿದ್ದಾರೆ. ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಎಚ್ ಸುಬ್ಬಯ್ಯ ಗಾಣಿಗ ಶಿವಮೊಗ್ಗ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗಾಣಿಗ ಸಮುದಾಯದ ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಹನೀಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಅದಲ್ಲದೆ ನಮ್ಮ ಸಮುದಾಯದ ಮಹನೀಯರು ಹಲವಾರು ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನಡೆಯಲಿದೆ. ಮಂಜುನಾಥ್ ಸಾಧನ ಅಕಾಡೆಮಿ ಯುಟ್ಯೂಬ್ ಚಾನೆಲ್ ಶಿಕಾರಿಪುರ ಇವರು ಯುವಕ-ಯುವತಿಯರಿಗೆ ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ. ಮೂರು ಜಿಲ್ಲೆಯ ಸುಮಾರು 150 ಕ್ಕಿಂತಲೂ ಹೆಚ್ಚು ಯುವಕ-ಯುವತಿಯರು ಈಗಾಗಲೇ ನೊಂದಣಿ ಮಾಡಿದ್ದು ಪಾಲಕರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲ್ಲಿ ಜನಪ್ರತಿನಿಧಿ ಪ್ರಕಾಶನ ಪ್ರಕಟಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಹೆಚ್.ಸುಬ್ಬಯ್ಯ ನವರು ಬರೆದಿರುವ ಪ್ರವಾಸ ಕಥನ ಉತ್ತರದ ಸನ್ನಿಧಿಯಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಪುಸ್ತಕವನ್ನು ಕನ್ನಡ ಪ್ರಭ ಪತ್ರಿಕೆಯ ನಿವೃತ್ತ ಹಿರಿಯ ಸುದ್ಧಿ ಸಂಪಾದಕ ಡಾ.ವಾಸುದೇವ ಎಮ್.ಶೆಟ್ಟಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.
ಮಧ್ಯಾಹ್ನ 12 ಗಂಟೆಯಿಂದ ಯುಪಿಎಸ್‍ಸಿ ಮತ್ತು ಕೆಪಿಎಸ್‍ಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವುದು ಹೇಗೆ ಎನ್ನುವುದರ ಕುರಿತು ಸಾಧನಾ ಅಕಾಡೆಮಿ, ಯುಟ್ಯೂಬ್ ಚಾನೆಲ್ ಶಿಕಾರಿಪುರ ಇದರ ಮಂಜುನಾಥ ಬಿ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಟ್ರಸ್ಟ್ ವಿಚಾರವಾಗಿ ವಿಚಾರಗೋಷ್ಠಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಯುವ ಮಾನಸ ಗಾಣಿಗ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಚ್.ಸುಬ್ಬಯ್ಯ ಗಾಣಿಗ, ಟ್ರಸ್ಟಿಗಳಾದ ಮುಂಜುನಾಥ ಎನ್.ಗಾಣಿಗ ಸೇಲಂ, ಮಂಜುನಾಥ ಹುಲುವಾಡಿ, ವಿ.ಐ.ಎಸ್.ಎಲ್ ಭದ್ರಾವತಿ ಇದರ ನಿವೃತ್ತ ಇಂಜಿನಿಯರ್ ಕುಸುಮಾಕರ ಉಪಸ್ಥಿತರಿದ್ದರು.