ಕುಂದಾಪುರ ಮಿರರ್ ಸುದ್ದಿ…
ಕೋಟ : ಡಾ. ಕಾರಂತ ಪ್ರತಿಷ್ಠಾನ ಕೋಟ, ಡಾ.ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ಕರಾವಳಿ ಕಣ್ಮಣಿ ದಿ. ಕೆ.ಸಿ ಕುಂದರ್ ಸ್ಮಾರಕ ದತ್ತಿ ಪುರಸ್ಕಾರವನ್ನು ಯುವ ಉದ್ಯಮಿ, ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟದ ಕಾರಂತ ಥೀಮ್ ಪಾರ್ಕ್‍ನಲ್ಲಿ ಪ್ರದಾನ ಮಾಡಲಾಯಿತು.
ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಗೋವಿಂದ ಬಾಬು ಪೂಜಾರಿ ಅವರು ಸಮಾಜಕ್ಕೆ ನಮ್ಮಿಂದಾದ ನೆರವು ನೀಡುವುದರಲ್ಲಿ ಸಂತೋಷವಿದೆ, ನಾವು ಸಾಗಿದ ದಾರಿ ಮರೆಯದಿದ್ದಾಗ ಪ್ರತಿಯೊಬ್ಬರಿಗೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನೋಭಾವ ತನ್ನಿಂದತಾನೆ ಬೆಳೆಯುತ್ತದೆ. ಗೆದ್ದಾಗ ಜೈಕಾರ ಹಾಕುವ ಬದಲು ಅವರ ಕಷ್ಟದ ಸಮಯದಲ್ಲಿ ನೆರವಾಗುವುದು ಉತ್ತಮ. ಇನ್ನಷ್ಟೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆಯಿದೆ. ಥೀಮ್ ಪಾರ್ಕ್ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಫಲಾಪೇಕ್ಷೆ ಇಲ್ಲದೇ ಮಾಡುವ ಸಮಾಜಮುಖಿ ಚಟುವಟಿಕೆಗಳು ಶ್ರೇಷ್ಠವೆನಿಸಕೊಳ್ಳುತ್ತವೆ. ದಿ.ಕೆ.ಸಿ ಕುಂದರ್ ನೀಡಿದ ಮಾರ್ಗದರ್ಶನ ನಮ್ಮ ಬದುಕಿನ ಯಶಸ್ಸಿನ ಬದುಕಿನ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಡಾ.ಗೋವಿಂದ ಬಾಬು ಪೂಜಾರಿ ಅವರ ಸಮಾಜಮುಖಿ ಚಟುವಟಿಕೆಗಳು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಕ.ಸಾ.ಪ ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ್, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಪಿ.ಡಿ.ಓ ಜಯರಾಮ್ ಶೆಟ್ಟಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಜೆ.ಸಿ.ಐ ಕಲ್ಯಾಣಪುರ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ಅನಿತಾ ನರೇಂದ್ರ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಕುಮಾರಿ ಸಂಜನ, ಕುಮಾರಿ ಶರಧಿ, ಕುಮಾರಿ ರಚನಾ ಕಾರ್ಯಕ್ರಮ ನಿರೂಪಿಸಿದರು.