ಕುಂದಾಪುರ ಮಿರರ್ ಸುದ್ದಿ…
ಕೋಟ: ಕರ್ನಾಟಕ ಸರ್ಕಾರ ತನ್ನ ನೌಕರರಿಗೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ಜಿಲ್ಲಾ ಮಟ್ಟದ “ಸರ್ವೋತ್ತಮ ಪ್ರಶಸ್ತಿ” ಪುರಸ್ಕೃತರಾದ ಕೋಟ ಪಶು ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿಯಾದ ಡಾ. ಅರುಣ್ ಕುಮಾರ್ ಶೆಟ್ಟಿಯವರನ್ನು ಕೋಟ ಸಹಕಾರಿ ವ್ಯವಸಾಯಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ ತಿಮ್ಮ ಪೂಜಾರಿ ಮಾತನಾಡಿ ಡಾ. ಅರುಣ್ ಕುಮಾರ್ ಶೆಟ್ಟಿಯವರು ಕೋಟ ಪರಿಸರದಲ್ಲಿ ತಮ್ಮ ಕಾರ್ಯವೈಕರಿಯಿಂದ ಚಿರಪರಿಚಿತರಾದವರು. ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಲ್ಲದೆ, ಸ್ಥಳೀಯ ಕೋಟ ಪಂಚಾಯತ್‍ನ ಆಡಳಿತಾಧಿಕಾರಿಯಾಗಿಯೂ ಯಶಸ್ವಿ ಸೇವೆ ಸಲ್ಲಿಸಿರುತ್ತಾರೆ. ಹಾಗೆಯೇ ಕೋಟ ಸಹಕಾರಿ ವ್ಯವಸಾಯಕ ಸಂಘದ ಸಹಭಾಗಿತ್ವದಲ್ಲಿ ದಾಖಲೆಯ ಜಿಲ್ಲಾ ಮಟ್ಟದ ಜಾನುವಾರು ಉತ್ಸವದ ಜವಾಬ್ದಾರಿಯನ್ನು ವಹಿಸಿಕೊಂಡು, ಸುಮಾರು 1200ಕ್ಕೂ ಮಿಕ್ಕಿ ಜಾನುವಾರುಗಳ ವರ್ಗೀಯ ತಳಿಗಳ ಸ್ಪರ್ಧೆಯನ್ನು ಆಯೋಜಿಸಿದ ಹೆಗ್ಗಳಿಕೆಯು ಇವರದ್ದಾಗಿದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿನ ಅವರ ಸೇವೆ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಸಂಘದ ಹಿರಿಯ ಸದಸ್ಯರಾದ ಎಚ್ ರಾಮದೇವ ಐತಾಳ,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ,ಸಿಬ್ಬಂದಿವರ್ಗ ಉಪಸ್ಥಿತರಿದ್ದರು.