ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಶುಕ್ರವಾರ ಮಧ್ಯಾಹ್ನ ಮೈಸೂರಿನ ಮಹಾರಾಜರಾದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದರು.
ಕಾರ್ಯಕ್ರಮವೊಂದರ ನಿಮಿತ್ತ ಕುಂದಾಪುರಕ್ಕೆ ಆಗಮಿಸಿದ ವೇಳೆ ಅವರು ಆನೆಗುಡ್ಡೆಗೆ ಭೇಟಿ ನೀಡಿದ್ದು ವಿನಾಯಕನ ದರ್ಶನ ಪಡೆದರು. ಈ ವೇಳೆ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಭರಮಾಡಿಕೊಂಡು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ , ಹಿರಿಯ ಧರ್ಮದರ್ಶಿಗಳಾದ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ದೇವಸ್ಥಾನದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.
ಸಮಾಜ ಸೇವಕ ಗಣೇಶ್ ಪುತ್ರನ್, ಕ್ಲೀನ್ ಕುಂದಾಪುರ ಪ್ರಾಜೆಕ್ಟಿನ ಭರತ್ ಬಂಗೇರ, ಪ್ರಮುಖರಾದ ಸರಸ್ವತಿ ಜಿ. ಪುತ್ರನ್, ಕಲ್ಪನಾ ಭಾಸ್ಕರ್ ಮೊದಲಾದವರು ಇದ್ದರು.