ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಗ್ರಾಮೀಣ ಪ್ರದೇಶದ ಯುವಜನತೆಯಲ್ಲಿನ ಪ್ರತಿಭೆಯ ವಿಕಸನಕ್ಕೆ ಕಲಾಸಂಜೆಯಂತಹ ವೇದಿಕೆಗಳ ಅವಶ್ಯಕತೆ ಇರುತ್ತದೆ. ಪ್ರತಿಭೆಗಳು ಬೆಳಗಲು ಸೂಕ್ತ ವೇದಿಕೆಗಳ ಬೇಕಾಗುತ್ತದೆ. ಸುಪ್ತ ಪ್ರತಿಭೆಗಳನ್ನು ಇಂಥಹ ವೇದಿಕೆಗಳ ಮೂಲಕ ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಕಲಾಸಂಜೆ ಕಾರ್ಯಕ್ರಮ ಶ್ಲಾಘನೀಯ ಎಂದು ನಿವೃತ್ತ ತಾಲ್ಲೂಕು ವೈದ್ಯಾಧಿಕಾರಿ ಡಾ. ಎ.ವಸಂತ ಕುಮಾರ್ ಶೆಟ್ಟಿ ಹೇಳಿದರು.
ಅವರು ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆಯ ಮೈದಾನದಲ್ಲಿ ಟೀಮ್ ಅಂಪಾರ್ ಇವರ ಆಶ್ರಯದಲ್ಲಿ ನಡೆದ ಕಲಾಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಲಾಸಂಜೆ ಕಾರ್ಯಕ್ರಮದ ರಾಯಭಾರಿ ಉಮೇಶ್ ಶೆಟ್ಟಿ ಶಾನ್ಕಟ್ಟು ಮಾತನಾಡಿ, ಸಾಮಾಜಿಕ ಸೇವೆ ಹಾಗೂ ಗುಣಮಟ್ಟದ ಕಾರ್ಯಕ್ರಮವನ್ನು ಇಲ್ಲಿ ನೀಡಬೇಕು ಎನ್ನುವ ಉದ್ದೇಶದಿಂದ ಟೀಂ ಅಂಪಾರು ಇಂಥಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಅಂಪಾರು ಸಂಜಯ್ ಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಉದಯ ಕುಮಾರ್ ಜಿ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಂಪಾರ ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೇಟ್, ಉದ್ಯಮಿ ಆನಂದ್ ಶೆಟ್ಟಿ, ಉದ್ಯಮಿ ರಾಜೀವ್ ಕೊಠಾರಿ, ನವಿ ಮುಂಬೈ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಶ್ರೀ ದುರ್ಗಾ ಕನ್ಟ್ರಕ್ಷನ್ಸ್ ದಾಂಡೇಲಿ ಮ್ಯಾನೇಜಿಂಗ್ ಡೈರೆಕ್ಟರ್ ಎಸ್.ಪ್ರಕಾಶ್ ಶೆಟ್ಟಿ ಗೈನಾಡಿ, ಮುಂಬೈ ಸ್ಪೋರ್ಟ್ಸ್ ಕಮಿಟಿ, ಬಂಟ್ಸ್ ಸಂಘ ಚೇರ್‍ಮನ್ ಗಿರೀಶ್ ಆರ್. ಶೆಟ್ಟಿ ತೆಳ್ಳಾರು, ಉದ್ಯಮಿ ನವೀನ್ ಕುಮಾರ್ ಹೆಗ್ಡೆ, ಪ್ರಥಮ ಪಿಡಬ್ಲ್ಯೂಡಿ ದರ್ಜೆ ಗುತ್ತಿಗೆದಾರ ವಿಜಯಾನಂದ ಶೆಟ್ಟಿ ಹಳ್ನಾಡು, ಕಲಾಸಂಜೆ ರಾಯಭಾರಿಗಳಾದ ಎ.ಕಿರಣ್ ಹೆಗ್ಡೆ, ಕೆ.ಅಶೋಕ್ ನಾಯ್ಕ್, ಸುರೇಂದ್ರ ಶೆಟ್ಟಿ ಕೋಟೆಬೆಟ್ಟು, ಎ.ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಡಾ.ಜಗದೀಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನವೀನ್ ಶೆಟ್ಟಿ ಶಾನ್ಕಟ್ಟ್ ಪ್ರಾಸ್ತಾವಿಕ ಮಾತನಾಡಿದರು. ಉಮೇಶ್ ಕೊಠಾರಿ ವಂದಿಸಿದರು.
ಕಲಾ ಸಂಜೆ ಕಾರ್ಯಕ್ರಮ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಲಾಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕನ್ನಡಿಕಟ್ಟೆ ಕಾವ್ಯ ಯಕ್ಷ ಗಂಧರ್ವ ಗಾನ, ಯಕ್ಷಗಾನ ನೃತ್ಯ ರೂಪಕ, ಕುಂದಾಪುರ ಕನ್ನಡ ಜನಪದ ಗೀತೆ, ಸಂಧ್ಯಾನಾದ, ಕಲಾನ್ವೇಷಣೆ ಗೀತಾ ಗಾಯನ ಸ್ಪರ್ಧೆ, ಕಾರ್ಮಿಕ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರೊಂದಿಗೆ ಮಾತು-ಕಥೆ, ಊರ ಸಾಧಕರಿಗೆ ಗೌರವದ ಆಸನ, ರಾಜ್ಯ ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ದೆ, ರಾಜ್ಯ ಪ್ರಶಸ್ತಿ ಪುರಸ್ಕೃತ ಚಿತ್ರನಟ ದೇವದಾಸ್ ಕಾಪಿಕಾಡ್ ನಿರ್ದೇಶಿಸಿ ಹಾಸ್ಯಮಯ ಕನ್ನಡ ನಾಟಕ ‘ಕಂಜೂಸ್ ನನ್ಮಗ’ ಪ್ರದರ್ಶನಗೊಂಡಿತು.