ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಕ್ಲಾಡಿ ಗ್ರಾಮದ ಗ್ರಾಮದೇವತೆ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಮೇ 10 ರಿಂದ ಆರಂಭವಾಗಲಿದ್ದು, ಮೇ 12ರವರೆಗೆ ನಡೆಯಲಿದೆ. ಶಿರಸಿಯ ಮಾರಿಕಾಂಬೆಯ ತಂಗಿಯೆಂದೇ ಜನಜನಿತವಾಗಿರುವ ಕೆಳಾಕಳಿ ದೇವಿಯ ಜಾತ್ರಾ ಮಹೋತ್ಸವವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ದೇವಸ್ಥಾನದ ವಠಾರದಲ್ಲಿ ಮೇ 9 ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ರಾತ್ರಿ 12ಕ್ಕೆ ದೇವಿಯ ವೈಭವದ ಬೀಡಿಕೆ ಮೆರವಣಿಗೆ, ಮೇ 10 ರಂದು ಹರಕೆಯ ಸೇವೆಗಳು, ಕೋಣನ ಪುರ ಪ್ರವೇಶ, ಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನಾ ಮಂಡಳಿಯಿಂದ ಭಕ್ತಿ ಲಹರಿ, ನಾಟಕ, ಯಕ್ಷಗಾನ, ಮೇ 11ರಂದು ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಕಸಗುಡಿಸುವ ಸೇವೆ, ಅನ್ನಸಂತರ್ಪಣೆ, ಮೇ 12 ರಂದು ತುಲಾಭಾರ, ದೇವಿಯ ಪುರಪ್ರವೇಶ, ಹರಕೆ ಸೇವೆ, ಅನ್ನಸಂತರ್ಪಣೆ ನಡೆಯಲಿದೆ.
ಕೋಣನ ಪುರ ಮೆರವಣಿಗೆ
ದೇಗುಲದಲ್ಲಿ ಪೂಜೆ ಮಾಡಿ, ಜನರ ಸಂಕಷ್ಟ ನಿವಾರಣೆಗೆಂದು ಪುರ ಮೆರವಣಿಗೆ ಹೊರಡುವ ದೈವ ಸ್ವರೂಪಿಯಾದ ಕೋಣನಿಗೆ ಗ್ರಾಮದ ಮುತ್ತೈದೆಯರು ಕಾಲು ತೊಳೆದು, ಹಣೆಗೆ ಅರಿಶಿನ ಕುಂಕುಮವಿಟ್ಟು, ನೆತ್ತಿಗೆ ಎಣ್ಣೆ ಹಾಕಿ ಭಕ್ತಿಯಿಂದ ಕಾಲಿಗೆರಗಿ ಮಾರಿಕಾಂಬಾ ಕಾಪಾಡಮ್ಮಾ ಎಂದು ಭಯಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಕೋಣ ಮನೆ ಬಾಗಿಲಿಗೆ ಬಂದರೆ ಶುಭ ಎನ್ನುವ ನಂಬಿಕೆಯಿಂದ ಕೋಣನ ಮನೆ -ಮನೆ ಮೆರವಣಿಗೆ ನಡೆಯುತ್ತದೆ.
ಶಿರಸಿಯಂತೆ ಮನೆ-ಮನೆ ಮೆರವಣಿಗೆ
ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯ ಸಂದರ್ಭ ಕೋಣನ ಮೆರವಣಿಗೆ ನಡೆಯುವುದು ವಾಡಿಕೆ. ರಾಜ್ಯದ ಅದೆಷ್ಟೋ ಮಾರಿಕಾಂಬಾ ದೇವಿಯ ದೇವಸ್ಥಾನಗಳಲ್ಲಿ ಶಿರಸಿ ಬಿಟ್ಟರೆ ಕೋಣನ ಮೆರವಣಿಗೆ ನಡೆಯುವುದು ಕೆಳಾಕಳಿಯಲ್ಲಿ ಮಾತ್ರ ಅನ್ನುವುದು ವಿಶೇಷ. ಅಂದರೆ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಕೆಳಾಕಳಿಯಲ್ಲಿ ಮಾತ್ರ ಈ ಪದ್ಧತಿಯಿದೆ. ಜಾತ್ರೆಯ ಒಂದು ವಾರ ಮೊದಲಿನ ಮಂಗಳವಾರ (ಈ ಬಾರಿ ಮೇ 4) ಕೋಣನ ಮೆರವಣಿಗೆ ಹೊರಟಿದ್ದು, ಹಕ್ಲಾಡಿ, ಹರ್ಕೂರು ಹಾಗೂ ಸೇನಾಪುರ ಈ 3 ಗ್ರಾಮಗಳ ಎಲ್ಲ ಮನೆಗಳಿಗೆ ಭೇಟಿ ನೀಡುತ್ತದೆ. ಈಗ ಮನೆ ಹೆಚ್ಚಾಗಿದ್ದರಿಂದ ಅಲ್ಲಲ್ಲಿ ಒಂದು ಕಡೆ ಕಟ್ಟೆ ಮಾಡಿ, ಅಲ್ಲಿಯೇ ಕೋಣನಿಗೆ ಪೂಜೆ ನೆರವೇರಿಸಲಾಗುತ್ತಿದೆ.
21 ದಿನ ಮೊದಲೇ ನಿಗದಿ
ಜಾತ್ರೆಗೆ 21 ದಿನ ಮೊದಲೇ ಮಂಗಳವಾರ ದಿನ ನಿಗದಿಪಡಿಸಲಾಗುತ್ತದೆ. ಅಂದಿನಿಂದ ಹಕ್ಲಾಡಿ, ಹರ್ಕೂರು, ಸೇನಾಪುರ ಗ್ರಾಮದಲ್ಲಿ ಜಾತ್ರೆ ಮುಗಿಯುವವರೆಗೆ ಯಾವುದೇ ಮದುವೆ ಸಹಿತ ಯಾವುದೇ ಶುಭಕಾರ್ಯಗಳು ನಡೆಯವುದಿಲ್ಲ. ಅದಾದ ಎರಡನೇ ಮಂಗಳವಾರ ದೇಗುಲದ ಕಟ್ಟು-ಕಟ್ಟಲೆಗೆ ಸಂಬಂ„ಸಿದಂತೆ ಅನೇಕ
2 ವರ್ಷಕ್ಕೊಮ್ಮೆ ಯಾಕೆ ?
ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಶತಶತಮಾಗಳ ಇತಿಹಾಸವಿದೆ. ಶಿರಸಿ ಮಾರಿಕಾಂಬಾ ದೇವಿ ಅಕ್ಕನಾದರೆ, ಕೆಳಾಕಳಿ ದೇವಿ ತಂಗಿ ಅನ್ನುವುದು ಭಕ್ತರ ನಂಬಿಕೆ. ಒಂದು ವರ್ಷ ಶಿರಸಿಯಲ್ಲಾದರೆ, ಮತ್ತೊಂದು ವರ್ಷ ಕೆಳಾಕಳಿಯಲ್ಲಿ ಜಾತ್ರೆ ನಡೆಯುತ್ತದೆ. ಕಳೆದ ವರ್ಷ ಕೊರೊನಾ ಲಾಕ್‍ಡೌನ್‍ನಿಂದಾಗಿ ರದ್ದಾಗಿದ್ದರಿಂದ ಈ ವರ್ಷ ನಡೆಯುತ್ತಿದೆ. ಶಿರಸಿಯಲ್ಲಿ ಏನೆಲ್ಲ ನಡೆಯುತ್ತದೋ ಅದೆಲ್ಲವೂ ಇಲ್ಲಿಯೂ ನಡೆಯುತ್ತದೆ. ಬೇರೆ ದೇವಸ್ಥಾನ ಹಾಗೂ ದೇವರಿಗೆ ಹರಕೆ ತೀರಿಸಲು ಎಲ್ಲದಿನ ಅವಕಾಶವಿದ್ದರೂ, ಕೆಳಾಕಳಿಯಲ್ಲಿ ಜಾತ್ರೆ ವೇಳೆ ಮಾತ್ರ ಹರಕೆ ಸಂದಾಯಕ್ಕೆ ಅವಕಾಶ. ಜಾತ್ರೆ ಸಂದರ್ಭ ಹೊರ ಗದ್ದುಗೆಯಲ್ಲಿ ಮಾರಿಕಾಂಬೆ ದೇವಿ ಕೂರಿಸಿ, ಎಲ್ಲ ವರ್ಗದ ಜನರಿಗೂ ಪೂಜೆ ಮಾಡುವ ಅವಕಾಶವಿದ್ದು, ಸರ್ವಧರ್ಮ ಸಮನ್ವಯತೆಗೆ ಸಾಕ್ಷಿ.
ಕಳೆದ ವರ್ಷ ಕೊರೊನಾದಿಂದ ಜಾತ್ರೆ ನಡೆದಿರಲಿಲ್ಲ. ಅದರ ಪ್ರಾಯಶ್ಚಿತವಾಗಿ ಈ ವರ್ಷ ಆಚರಿಸಲಾಗುತ್ತಿದೆ. ಸಿರಸಿಯಂತೆಯಯೇ ಎಲ್ಲ ಆಚರಣೆಗಳನ್ನು ನಡೆಸಲಾಗುತ್ತಿದೆ. ಕೋಣನ ಪುರ ಮೆರವಣಿಗೆಯೆಂದರೆ ದೇವಿಯೇ ಮನೆ- ಮನೆಗೆ ಬಂದು, ಆಶೀರ್ವದಿಸುತ್ತಾಳೆ ಅನ್ನುವ ನಂಬಿಕೆ ನಮ್ಮೆಲ್ಲರದು. ಉಡುಪಿ, ಕುಂದಾಪುರ ಮಾತ್ರವಲ್ಲದೆ ಶಿರಸಿ, ಸಾಗರ, ನಗರ, ಹೊಸನಗರ ಕಡೆಯಿಂದೆಲ್ಲ ಭಕ್ತರು ಬರುತ್ತಾರೆ.
– ಜಯರಾಜ್ ಎಸ್.ಹೆಗ್ಡೆ, ಆನುವಂಶಿಕ ಮೊಕ್ತೇಸರ, ಶ್ರೀ ಮಾರಿಕಾಂಬಾ ದೇವಸ್ಥಾನ ಕೆಳಾಕಳಿ