ಮಕ್ಕಳು ಗ್ರಾಮ್ಯದ ಪರಿಸರದ ಹೂರಣವಾಗಿ ತಿಂಗಳುಗಳ ಕಾಲ ರಸಭರಿತವಾದರು: ಗೋಪಾಲಕೃಷ್ಣ ನಾಯರಿ
ಕುಂದಾಪುರ ಮಿರರ್ ಸುದ್ದಿ
ಕೋಟ: ಮೂರು ದಿನಗಳಲ್ಲಿ ಹಂತ ಹಂತವಾಗಿ ಬಹಳ ಸೊಗಸಾಗಿ ಸಮಾರೋಪವನ್ನು ಮಾಡಲಾಗಿದ್ದನ್ನು ನಾನು ಅಚ್ಚುಮೆಚ್ಚಿನಿಂದ ಗಮನಿಸಿದ್ದೇನೆ. ನಮ್ಮ ಕಾಲಕ್ಕೆ ಹೋಲಿಸಿದರೆ, ಮಕ್ಕಳ ಬಗ್ಗೆ ವ್ಯಥೆ ಎನಿಸುತ್ತದೆ. ನಮ್ಮ ಕಾಲದಲ್ಲಿ ಅನುಭವಿಸಿದ ಮಜಾ ಪ್ರಸ್ತುತ ಕಾಲಘಟ್ಟದಲ್ಲಿ ಸಿಗುವುದಕ್ಕೆ ಸಾಧ್ಯವೇ ಇಲ್ಲ. ಆಟಗಳಾಗಲಿ, ತಿನ್ನುವ ಗ್ರಾಮ್ಯದ ಹಣ್ಣುಗಳಾಗಲೀ, ಹಾವು ಹುಳಗಳ ಪರಿಚಯವಾಗಲೀ, ಮರ ಗಿಡಗಳ ಸಂಬಂಧವಾಗಲೀ, ಮೀನು ಹಿಡಿಯುವ ಮಜಗಳು ನಿಮಗಿಲ್ಲ ಮಕ್ಕಳೇ.. ಆದರೂ ಒಂದಷ್ಟು ಗ್ರಾಮ್ಯ ಪರಿಸರದ ಲೇಪನದೊಂದಿಗೆ ಶಿಬಿರವನ್ನು ನಡೆಸಿ ತಿಂಗಳ ಪೂರ್ತಿ ಆರೋಗ್ಯ ವೃದ್ಧಿಸಿಕೊಂಡಿದ್ದೀರಿ. ಮೊಬೈಲ್ ಬಳಕೆಯಿಂದ ತಿಂಗಳುಗಳ ಕಾಲವಾದರೂ ದೂರವಿದ್ದು ಬೇರೆ ಬೇರೆ ವಿಷಯಗಳನ್ನು ಗಮನಿಸುವಂತಾಗಿದೆ. ಮಕ್ಕಳು ಗ್ರಾಮ್ಯದ ಪರಿಸರದ ಹೂರಣವಾಗಿ ತಿಂಗಳುಗಳ ಕಾಲ ರಸಭರಿತವಾದಿರಿ ಎಂದು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲ ಕೃಷ್ಣ ನಾಯರಿ ಅಭಿಪ್ರಾಯ ಪಟ್ಟರು.
ಮೇ 7ರಂದು, ತೆಕ್ಕಟ್ಟೆ ಸೇವಾ ಸಂಗಮ ಶಿಶುಮಂದಿರದ ಪರಿಸರದ ಹಾಡಿಯಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಯಶಸ್ವಿ ಕಲಾವೃಂದ ಕೊಮೆ-ತೆಕ್ಕಟ್ಟೆ ಆಯೋಜಿಸಿದ ‘ರಜಾರಂಗು-22’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಸಮಾರೋಪದ ಮಾತುಗಳನ್ನಾಡಿದರು.
ಯಕ್ಷಗುರು ಸೀತಾರಾಮ ಶೆಟ್ಟಿ ಕೊೈಕೂರು, ಶಿಬಿರದ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ರಂಗ ನಿರ್ದೇಶಕ ಪ್ರಶಾಂತ್ ಶೆಟ್ಟಿ ಕೋಟ, ನ್ಯತ್ಯ ನಿರ್ದೇಶಕಿ ಅಮೃತಾ ಉಪಾಧ್ಯ ಇವರನ್ನು ಸಮ್ಮಾನಿಸಲಾಯಿತು.
ನಿವೃತ್ತ ಉಪನ್ಯಾಸಕಿ ರೇಖಾ ಬನ್ನಾಡಿ ಮಾತನಾಡಿ, ಅನಿಸಿದ್ದನ್ನು ವೇದಿಕೆಯಲ್ಲಿ ವ್ಯಕ್ತಪಡಿಸುವ, ಅಭಿನಯಿಸುವ ಕಲೆಯನ್ನು ಕಲಿಸುವ ಶಿಬಿರವಷ್ಟೇ ಅಲ್ಲ. ಸ್ವತಂತ್ರವಾಗಿ ಬದುಕುವ ಬಗೆಯನ್ನು ತಿಳಿ ಹೇಳುವ ಕೆಲಸ ಇಲ್ಲಿ ಆಗಿದೆ. ಬರೇ ಓದು ಓದು ಬದುಕನ್ನು ಕಟ್ಟಿ ಕೊಡಲ್ಲ. ಸಮಾಜದ ಬಗೆ ಬಗೆಯ ಬಣ್ಣಗಳನ್ನು, ಕಲೆಗಳನ್ನು, ಕಸುಬನ್ನು ಕಲಿಸುವ ಮುಖೇನ ಉಭಯ ಸಂಸ್ಥೆಗಳು ಉತ್ತುಂಗಕ್ಕೇರಿದೆ ಎಂದು ಅಭಿಪ್ರಾಯ ಪಟ್ಟರು.
ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ಅರೆಹೊಳೆ ಸದಾಶಿವ ರಾವ್, ಗಣೇಶ್ ಸಿಲ್ಕ್ಸನ ಮಾಲಕ ಅನಂತ್ ನಾಯಕ್ ತೆಕ್ಕಟ್ಟೆ, ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಯಶಸ್ವಿ ಕಲಾವೃಂದದ ಕಾರ್ಯದರ್ಶಿ ವೆಂಕಟೇಶ ವೈದ್ಯ, ಸುಧಾಕರ ಆಚಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿದರು. ಪ್ರಶಾಂತ್ ಮಲ್ಯಾಡಿ ಸ್ವಾಗತಿಸಿ, ಶಂಕರನಾರಾಯಣ ಉಪಾಧ್ಯ ವಂದಿಸಿದರು.
ಬಳಿಕ ಎಚ್. ಎಸ್. ವೆಂಕಟೇಶ್ ಮೂರ್ತಿ ರಚನೆಯ ಪ್ರಶಾಂತ್ ಶೆಟ್ಟಿ ಕೋಟ ನಿರ್ದೇಶನದ “ಅಳಿಲು ರಾಮಾಯಾಣ” ನಾಟಕ ಶಿಬಿರದ ಮಕ್ಕಳಿಂದ ರಂಗದಲ್ಲಿ ಪ್ರಸ್ತುತಿಗೊಂಡಿತು.